ಧಾರವಾಡ : ನಿತ್ಯ ರುದ್ರ ಪಠಣದಿಂದ ದುಷ್ಟ ಬಾಧೆ ದೂರವಾಗಿ ಧನಾತ್ಮಕ ಶಕ್ತಿಸಂಚಯ ಅಧಿಕಗೊಳ್ಳುತ್ತದೆ ಎಂದು ಶ್ರೀಸಿದ್ಧಾರೂಢ ರುದ್ರ ಬಳಗದ ಮಾರ್ಗದರ್ಶಕಿ ವೇದಮಾತೆ ಮಂಗಳಾ ಮಠದ ಹೇಳಿದರು.
ಅವರು ನಗರದ ರೆವ್ಹೆನ್ಯೂ ಕಾಲನಿಯ ಶ್ರೀಸಿದ್ಧಾರೂಢಮಠದಲ್ಲಿ ಶ್ರೀಸಿದ್ಧಾರೂಢ ರುದ್ರ ಬಳಗದ ಸದಸ್ಯರು ತಮಗೆ ನೀಡಿದ ಗುರುವಂದನೆಯ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು. ರುದ್ರ ಪಠಣವು ಸಮಷ್ಟಿ ನಿಷ್ಟವಾದದ್ದು. ರುದ್ರ ಪಠಣದ ಫಲಶೃತಿ ಯಾರನ್ನೋ ನಿರ್ದಿಷ್ಟವಾಗಿ ಕೆಲವರನ್ನಷ್ಟೇ ಕೇಂದ್ರೀಕರಿಸದೇ ಸಲಕರಿಗೂ ಕ್ಷೇಮವನ್ನು ಮತ್ತು ಶ್ರೇಷ್ಠ ಜೀವನ ವಿಧಾನವನ್ನು ಬಯಸುತ್ತದೆ. ರುದ್ರ ಪಠಣದಿಂದ ವಾತಾವರಣದಲ್ಲಿ ಸಕಾರಾತ್ಮಕ ಶಕ್ತಿ ಬಹುದೂರ ವ್ಯಾಪಕವಾಗಿ ಪಸರಿಸುತ್ತದೆ ಎಂದರು.
ನಿವೃತ್ತ ಶಿಕ್ಷಣಾಧಿಕಾರಿ ಪಾರ್ವತಿ ವಸ್ತ್ರದ ಮಾತನಾಡಿ, ಅಂತರ್ಜಾಲದ ವೈಜ್ಞಾನಿಕ ಅನ್ವೇಷಣೆಯ ಸಂದರ್ಭದಲ್ಲಿ ಆವಿಷ್ಕಾರಗೊಂಡ ಸಾಮಾಜಿಕ ಜಾಲತಾಣಗಳ ವೈಭವೀಕರಣದಲ್ಲಿ ಅಮೂಲ್ಯ ಸಮಯವನ್ನು ವ್ಯರ್ಥ ಕಳೆಯದೇ ರುದ್ರಪಠಣದಂತಹ ಭಗವತ್ ನಾಮಸ್ಮರಣೆಯ ಕ್ಷಣಗಳಿಗೆ ನಿತ್ಯವೂ ಸಾಕ್ಷಿಯಾದರೆ ಮನಸ್ಸು ಧನಾತ್ಮಕ ನೆಲೆಯಲ್ಲಿ ತನ್ಮಯಗೊಂಡು ತಿಳಿಯಾಗುತ್ತದೆ ಎಂದರು.
ಶ್ರೀಸಿದ್ಧಾರೂಢ ರುದ್ರ ಬಳಗದ ದಾಕ್ಷಾಯಣಿ ಪಾಟೀಲ, ಶ್ರೀದೇವಿ ಕೋರದಾನಿಮಠ, ಪೂರ್ಣಿಮಾ ಹಿರೇಮಠ, ಪಾರ್ವತಿ ವಸ್ತ್ರದ, ದೀಪಾ ಬೆಟಗೇರಿ, ಸವಿತಾ ಹಿರೇಮಠ, ಅನ್ನಪೂರ್ಣ ಹರ್ತಿ, ಲಲಿತಾ ಬಬಲಾದ, ಹೇಮಲತಾ ಅಕ್ಕಿ, ಲಕ್ಷ್ಮೀ ಬೀಳಗಿ, ಸುಮನ ಬೆಟಗೇರಿ, ಉಷಾ ಕೋಠಿ, ವಿಜಯಾ ಪಾಟೀಲ ಅವರಿಗೆ ಕಳೆದ 3 ತಿಂಗಳ ಕಾಲ ವೇದಮಾತೆ ಮಂಗಳಾ ಮಠದ ಅವರು ಶ್ರೀರುದ್ರದ ನಮಕ- ಚಮಕದ 11 ಅಧ್ಯಾಯಗಳನ್ನು ಹಾಗೂ ಪುರುಷಸೂಕ್ತದ ವೇದೋಕ್ತ ಮಂತ್ರಗಳ ಶಾಸ್ತ್ರೋಕ್ತ ಪಠಣದ ಕ್ರಮಗಳನ್ನು ಬೋಧಿಸಿದರು. ಶ್ರೀದೇವಿ ಕೋರದಾನಿಮಠ ವಂದಿಸಿದರು.
ಧಾರವಾಡ ರೆವ್ಹೆನ್ಯೂ ಕಾಲನಿಯ ಶ್ರೀಸಿದ್ಧಾರೂಢಮಠದಲ್ಲಿ ಬುಧವಾರ ಶ್ರೀಸಿದ್ಧಾರೂಢ ರುದ್ರ ಬಳಗದ ಮಾರ್ಗದರ್ಶಕಿ ಮಂಗಳಾ ಮಠದ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಪಾರ್ವತಿ ವಸ್ತ್ರದ, ದಾಕ್ಷಾಯಣಿ ಪಾಟೀಲ, ಶ್ರೀದೇವಿ ಕೋರದಾನಿಮಠ, ದೀಪಾ ಬೆಟಗೇರಿ, ಪೂರ್ಣಿಮಾ ಹಿರೇಮಠ, ಅನ್ನಪೂರ್ಣ ಹರ್ತಿ, ಸವಿತಾ ಹಿರೇಮಠ, ಲಲಿತಾ ಬಬಲಾದ, ಹೇಮಲತಾ ಅಕ್ಕಿ, ಲಕ್ಷ್ಮೀ
ಬೀಳಗಿ, ಸುಮನ ಬೆಟಗೇರಿ, ಉಷಾ ಕೋಠಿ, ವಿಜಯಾ ಪಾಟೀಲ ಇತರರು ಇದ್ದರು.


