ಮಂಗಳೂರು: ನಗರದ ಸಂತ ಆಗ್ನೆಸ್ ಕಾಲೇಜಿನ ಬಳಿ ಎಬಿವಿಪಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಟೀಕೆಗಳಿಗೆ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಪ್ರತಿಭಟನೆ ನಡೆಸಲು ಬಯಸುವ ಯಾರಿಗೂ ಪೊಲೀಸರು ಅನುಮತಿ ನಿರಾಕರಿಸಿಲ್ಲ. ಆದರೆ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುವ ಸಾಧ್ಯತೆಯಿದ್ದರೆ ಕೆಲವು ಷರತ್ತುಗಳನ್ನು ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಾಲೇಜಿನ ಬಳಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಆಯೋಜಕರು ಪೊಲೀಸರಿಂದ ಅನುಮತಿ ಪಡೆದಿರಲಿಲ್ಲ. ಅಲ್ಲದೆ, ಪ್ರತಿಭಟನೆ ನಡೆಸುವ ಬಗ್ಗೆ ಮುಂಚಿತವಾಗಿಯೂ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಅವರಿಗೆ ಪ್ರತಿಭಟನೆ ನಡೆಸಲು ಅವಕಾಶ ನೀಡಿ ಅಗತ್ಯ ಸಹಕಾರವನ್ನೂ ಒದಗಿಸಲಾಗಿತ್ತು. ಆದರೆ ಹೊರಗಿನಿಂದ ಬಂದ ಕೆಲವರು ಕಾಲೇಜಿನೊಳಗೆ ಪ್ರವೇಶಿಸಲು ಯತ್ನಿಸಿದ ಹಿನ್ನೆಲೆಯಲ್ಲಿ, ಕಾಲೇಜು ಆಡಳಿತ ಮಂಡಳಿಯ ದೂರು ನೀಡುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಒಳಗೆ ಪ್ರವೇಶಿಸದಂತೆ ತಡೆಯಲಾಯಿತು ಎಂದು ತಿಳಿಸಿದ್ದಾರೆ.
ವಶಕ್ಕೆ ಪಡೆದವರಿಂದ ಮುಂದೆ ಇಂತಹ ಕೃತ್ಯಗಳನ್ನು ಮರುಕಳಿಸುವುದಿಲ್ಲ ಎಂಬ ಭರವಸೆಯೊಂದಿಗೆ ಮುಚ್ಚಳಿಕೆ ಬರೆಸಿಕೊಳ್ಳಲು ಪೊಲೀಸರು ಉದ್ದೇಶಿಸಿದ್ದರು. ಆದರೆ ಅವರು ವಿದ್ಯಾರ್ಥಿಗಳಾಗಿದ್ದ ಹಿನ್ನೆಲೆಯಲ್ಲಿ ಅವರ ಮನವಿಯನ್ನು ಪರಿಗಣಿಸಿ ಉದಾರವಾಗಿ ನಡೆದುಕೊಳ್ಳಲಾಯಿತು. ಇಷ್ಟಾದರೂ ಕಾಲೇಜು ಆಡಳಿತ ಮಂಡಳಿಯು ಪ್ರತಿಭಟನಾಕಾರರ ಬೇಡಿಕೆಗಳನ್ನು ಒಪ್ಪಿಕೊಂಡ ಬಳಿಕವೂ ಕೆಲವರು ಮಧ್ಯಾಹ್ನ ಮತ್ತೆ ಸ್ಥಳಕ್ಕೆ ತೆರಳಿ ವಿದ್ಯಾರ್ಥಿಗಳನ್ನು ಪ್ರಚೋದಿಸಲು ಯತ್ನಿಸಿದರು. ಈ ಹಿನ್ನೆಲೆಯಲ್ಲಿ ಅವರನ್ನು ಮತ್ತೊಮ್ಮೆ ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಲಾಯಿತು ಎಂದು ಆಯುಕ್ತರು ವಿವರಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ‘ಭಾರತ್ ಮಾತಾ ಕಿ ಜೈ’ ಘೋಷಣೆ ಕೂಗಿದರೆ ಮಂಗಳೂರು ಪೊಲೀಸರಿಗೆ ಏಕೆ ಅಸಮಾಧಾನ ಎಂಬರ್ಥದ ಟೀಕೆಗಳು ಹರಿದಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ದೇಶಭಕ್ತಿಯ ಘೋಷಣೆಗಳನ್ನು ಕೂಗುವುದಕ್ಕೂ ಕಾನೂನು ಉಲ್ಲಂಘಿಸುವುದಕ್ಕೂ ಸಂಬಂಧ ಕಲ್ಪಿಸಬಾರದು ಎಂದು ಹೇಳಿದ್ದಾರೆ.
ಪೊಲೀಸರು ಭಾರತ ಮಾತೆಯ ಹೆಮ್ಮೆಯ ಪುತ್ರರು ಮತ್ತು ಪುತ್ರಿಯರಾಗಿದ್ದು, ರಾಷ್ಟ್ರದ ಸೇವೆ ಹಾಗೂ ರಕ್ಷಣೆಯ ಉದ್ದೇಶದಿಂದ ಇಲಾಖೆಗೆ ಸೇರ್ಪಡೆಯಾಗಿದ್ದಾರೆ. ಭಾರತದ ಸಂವಿಧಾನವನ್ನು ಎತ್ತಿಹಿಡಿಯಲು ಮತ್ತು ದೇಶದ ಏಕತೆ ಹಾಗೂ ಅಖಂಡತೆಯನ್ನು ಕಾಪಾಡಲು ಪ್ರಮಾಣವಚನ ಸ್ವೀಕರಿಸಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ದೇಶದ ಗಡಿಯೊಳಗೆ ರಾಷ್ಟ್ರವನ್ನು ಸಂರಕ್ಷಿಸುವ ಸಂದರ್ಭದಲ್ಲಿ ಕೆಲವೊಮ್ಮೆ ಕಾನೂನು ಉಲ್ಲಂಘಿಸುವ ಸಹ ನಾಗರಿಕರನ್ನು ನಿಯಂತ್ರಿಸುವ ಅನಿವಾರ್ಯತೆ ಎದುರಾಗುತ್ತದೆ. ಕಾನೂನು ಉಲ್ಲಂಘಿಸುವವರು ಅಥವಾ ಸಂವಿಧಾನದ ಆಶಯಗಳಿಗೆ ಅಗೌರವ ತೋರುವವರು ದೇಶಭಕ್ತಿಯನ್ನು ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳುವ ಗುರಾಣಿಯಾಗಿ ಬಳಸಬಾರದು ಎಂದು ಎಚ್ಚರಿಸಿದ್ದಾರೆ.
ತಮ್ಮ ಕೃತ್ಯಗಳಿಂದ ಜನರ ಗಮನ ಬೇರೆಡೆ ಸೆಳೆಯಲು ದೇಶಭಕ್ತಿಯ ಘೋಷಣೆಗಳನ್ನು ಬಳಸುವುದು ರಾಷ್ಟ್ರಸೇವೆಯಲ್ಲ. ಬದಲಾಗಿ, ತಮ್ಮ ನಡವಳಿಕೆಗಳು ಭಾರತ ಮಾತೆಗೆ ಹೆಮ್ಮೆ ತರುವ ಮೌಲ್ಯಗಳು ಮತ್ತು ತತ್ವಗಳಿಗೆ ಅನುಗುಣವಾಗಿವೆಯೇ ಎಂಬುದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿರುವ ಪೊಲೀಸ್ ಆಯುಕ್ತರು, ತಮ್ಮ ಹೇಳಿಕೆಯನ್ನು ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಯೊಂದಿಗೆ ಮುಕ್ತಾಯಗೊಳಿಸಿದ್ದಾರೆ.

