ಅಬುಧಾಬಿ: ಅಬುಧಾಬಿಯಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಬಾಂಗ್ಲಾದೇಶದ ತಾಯಿ ಮತ್ತು ಅವರ 15 ವರ್ಷದ ಮಗ ಸಾವನ್ನಪ್ಪಿದ್ದಾರೆ. ರಾತ್ರಿ 9 ಗಂಟೆ ಸುಮಾರಿಗೆ ಅಬುಧಾಬಿಯ ಅಲ್ ಐನ್ ರಸ್ತೆಯಲ್ಲಿರುವ ಅಲ್ ವಾತ್ಪಾ ಸೇತುವೆ ಬಳಿ ಈ ಅಪಘಾತ ಸಂಭವಿಸಿದೆ. ಸಮುದಾಯದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕುಟುಂಬವು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಅಪಘಾತದಲ್ಲಿ ಬಾಂಗ್ಲಾದೇಶದ ಪ್ರಜೆ ಆಶಿಮಾ ಚೌಧರಿ (48) ಮತ್ತು ಅವರ ಮಗ ಅರಿತ್ರಾ ಬಿಸ್ವಾಸ್ (15) ತಕ್ಷಣವೇ ಸಾವನ್ನಪ್ಪಿದರು. ವಾಹನ ಚಲಾಯಿಸುತ್ತಿದ್ದ ಅವರ ಪತಿ ಸ್ವರೂಪ್ ಕಾಂತಿ ಬಿಸ್ವಾಸ್ (59) ಗಾಯಗಳೊಂದಿಗೆ ಪಾರಾಗಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಕಾರಿನ ಹಿಂಭಾಗಕ್ಕೆ ವೇಗವಾಗಿ ಬಂದ ಮತ್ತೊಂದು ವಾಹನ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಬಾಂಗ್ಲಾದೇಶ ರಾಯಭಾರ ಕಚೇರಿಯೂ ಈ ಘಟನೆಯನ್ನು ದ್ರಡಪಡಿಸಿದೆ.
ಈ ಕುಟುಂಬವು ಹಲವು ವರ್ಷಗಳಿಂದ ಅಬುಧಾಬಿಯಲ್ಲಿ ಖಾಯಂ ನಿವಾಸಿಗಳಾಗಿದ್ದರು. ಸ್ವರೂಪ್ ಕಾಂತಿ ಬಿಸ್ವಾಸ್ ಎಂಜಿನಿಯರ್ ಆಗಿದ್ದು ಮತ್ತು ಅವರ ಪತ್ನಿ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಹಿರಿಯ ಮಗಳು ದುಬೈನಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ. ಕುಟುಂಬವು ಯುಎಇಯಲ್ಲಿ ಅಂತ್ಯಕ್ರಿಯೆಯನ್ನು ನಡೆಸಲು ನಿರ್ಧರಿಸಿದೆ.

