ಮಂಗಳೂರು: ಎಸ್ಸಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಸೊರಕೆ ಚಂದ್ರಶೇಖರ್ ಅವರ 125ನೇ ಜನ್ಮ ವರ್ಷಾಚರಣೆಯ ಅಂಗವಾಗಿ 2026ರ ಅ.22ರಿಂದ ಒಂದು ವರ್ಷದ ಕಾಲ ವಿವಿಧ ಶೈಕ್ಷಣಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಅರ್ಹ ವಿದ್ಯಾರ್ಥಿಗಳಿಗೆ ₹90 ಲಕ್ಷ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಎಸ್ಸಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ರಜನೀಶ್ ಸೊರಕೆ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2027ರ ಅ.22ರಂದು 125ನೇ ಜನ್ಮ ವರ್ಷಾಚರಣೆ ನಡೆಯಲಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಸಂಸ್ಥೆಯ ಸಲಹೆಗಾರ ಆ್ಯಂಡೋಪೌಲ್ ಮಾತನಾಡಿ, ಪ್ರೌಢಶಾಲೆಯ ಇಬ್ಬರು ಶಿಕ್ಷಕರಿಗೆ 24 ಕ್ಯಾರೆಟ್ ಶುದ್ಧ ಚಿನ್ನದ ಪ್ರಶಸ್ತಿ ಹಾಗೂ 10 ಶಿಕ್ಷಕರಿಗೆ ಬೆಳ್ಳಿ ಪ್ರಶಸ್ತಿ ನೀಡಲಾಗುವುದು. ಅತ್ಯುತ್ತಮ ಶಾಲಾ ನಾಯಕ ಪ್ರಶಸ್ತಿಯಡಿ ₹7,000, ₹5,000 ಹಾಗೂ ₹3,000 ನಗದು ಬಹುಮಾನ ನೀಡಲಾಗುವುದು. 9ನೇ ತರಗತಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಥವಾ 10ನೇ ತರಗತಿಯ ಮಧ್ಯಂತರ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿದ ಅರ್ಹ ವಿದ್ಯಾರ್ಥಿಗಳಿಗೆ ₹5,000ರಿಂದ ₹50,000ದವರೆಗೆ ವಿದ್ಯಾರ್ಥಿವೇತನ ಹಾಗೂ ಸಾಧಕರಿಗೆ ಉಚಿತ ಶಿಕ್ಷಣದ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
ವರ್ಷಾಚರಣೆಯ ಅಂಗವಾಗಿ ಸಂಸ್ಥಾಪಕರ ಜೀವನಾಧಾರಿತ ಪುಸ್ತಕ ಬಿಡುಗಡೆ, ಆರೋಗ್ಯ ಶಿಬಿರಗಳು ಹಾಗೂ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಯು.ಕೆ.ಖಾಲಿದ್ ಉಪಸ್ಥಿತರಿದ್ದರು.

