ಮಂಗಳೂರು: ಜನಸಾಮಾನ್ಯರಿಗೆ ತ್ವರಿತ ನ್ಯಾಯ ಒದಗಿಸುವ ಉದ್ದೇಶದಿಂದ ಮಂಗಳೂರಿನಲ್ಲಿ ಕರ್ನಾಟಕ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು. ಇದಕ್ಕಾಗಿ ಸುತ್ತಮುತ್ತಲಿನ ಜಿಲ್ಲೆಗಳ ಸಹಕಾರದೊಂದಿಗೆ ಪಕ್ಷಾತೀತ ಹೋರಾಟ ಅಗತ್ಯ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.

ಯುನೈಟೆಡ್ ಲೀಗಲ್ ರಿಸರ್ಚ್ ಆ್ಯಂಡ್ ಜಸ್ಟಿಸ್ ಟ್ರಸ್ಟ್ ವತಿಯಿಂದ ಶುಕ್ರವಾರ ನಗರದ ಭಾರತೀಯ ರೆಡ್ಕ್ರಾಸ್ ಕಟ್ಟಡದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಸುಮಾರು 18 ವರ್ಷಗಳಿಂದ ಈ ಬೇಡಿಕೆಗಾಗಿ ಹೋರಾಟ ನಡೆಯುತ್ತಿದ್ದು, ಹೈಕೋರ್ಟ್ ಮೂವರು ನ್ಯಾಯಾಧೀಶರ ಸಮಿತಿ ರಚಿಸಿರುವುದು ಆಶಾದಾಯಕ ಬೆಳವಣಿಗೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಬಾರ್ ಅಸೋಸಿಯೇಶನ್ ಅಧ್ಯಕ್ಷ ಜಗದೀಶ್ ಶೇಣವ ಮಾತನಾಡಿ, ಮಂಗಳೂರು, ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಹೈಕೋರ್ಟ್ ಪೀಠ ಸಹಕಾರಿಯಾಗಲಿದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹೀಂ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಬೆಂಬಲ ಪಡೆಯುವ ಅಗತ್ಯವಿದೆ ಎಂದು ಹೇಳಿದರು. ಸಭೆಯಲ್ಲಿ ಹಲವು ಹಿರಿಯ ನ್ಯಾಯವಾದಿಗಳು, ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

