ಮಂಗಳೂರು: ಸೆಪ್ಟೆಂಬರ್ 30ರಂದು ಎಂಆರ್ಪಿಎಲ್ನ ಮೂರನೇ ಹಂತದಲ್ಲಿ ಸಂಭವಿಸಿದ ಸ್ಫೋಟ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಾಜೇಶ್ ಡಿಸಿಲ್ವ ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸುರತ್ಕಲ್ನ ಇಡ್ಯಾಗ್ರಾಮದ ಕಾನ ನಿವಾಸಿ ರಾಜೇಶ್ ಡಿಸಿಲ್ವ ಅವರು ಹಲವು ವರ್ಷಗಳಿಂದ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ನಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು
ಕೋಕರ್ ಹೈಡ್ರೋಟ್ರೀಟರ್ ಯೂನಿಟ್ (ಸಿಎಚ್ಟಿ ಯುನಿಟ್) ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಅವರು ಶೇಕಡಾ 35 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದರು, ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ವೈದ್ಯರ ಸತತ ಪ್ರಯತ್ನಗಳ ಹೊರತಾಗಿಯೂ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
ರಾಜೇಶ್ ಡಿಸಿಲ್ವ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತವಾಗಿದ್ದು, ಕುಟುಂಬಸ್ಥರು ಹಾಗೂ ಬಂಧುಮಿತ್ರರಲ್ಲಿ ಶೋಕ ಆವರಿಸಿದೆ.


