ಮಂಗಳೂರು: ತುಳುನಾಡಿನ ಸಾಂಪ್ರದಾಯಿಕ ಹುಲಿವೇಷ ಕಲೆಯನ್ನು ಉತ್ತೇಜಿಸುವ ಪಿಲಿನಲಿಕೆ ಸೀಸನ್-11 ಹುಲಿವೇಷ ಸ್ಪರ್ಧೆ ಅ. 20ರಂದು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ. ಬೆಳಿಗ್ಗೆ 10 ಗಂಟೆಯಿಂದ ಆರಂಭವಾಗುವ ಸ್ಪರ್ಧೆಯಲ್ಲಿ ಒಂಬತ್ತು ಪ್ರತಿಷ್ಠಿತ ಹುಲಿವೇಷ ತಂಡಗಳು ಭಾಗವಹಿಸಲಿವೆ ಎಂದು ಪಿಲಿನಲಿಕೆ ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ತಿಳಿಸಿದರು.

ಪಿಲಿನಲಿಕೆ ಪ್ರತಿಷ್ಠಾನ ಹಾಗೂ ನಮ್ಮ ಟಿವಿ ಸಹಯೋಗದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ₹10 ಲಕ್ಷ, ದ್ವಿತೀಯ ₹5 ಲಕ್ಷ ಹಾಗೂ ತೃತೀಯ ₹3 ಲಕ್ಷ ನಗದು ಬಹುಮಾನ ನೀಡಲಾಗುವುದು. ಭಾಗವಹಿಸುವ ಪ್ರತಿ ತಂಡಕ್ಕೆ ₹50 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತದೆ. ಮರಿಹುಲಿ, ಕರಿಹುಲಿ, ಮುಡಿ ಹಾರಿಸುವಿಕೆ, ತಾಸೆ, ಬಣ್ಣಗಾರಿಕೆ ಹಾಗೂ ಹುಲಿಕುಣಿತ ವಿಭಾಗಗಳ ವಿಜೇತರಿಗೆ ತಲಾ ₹50 ಸಾವಿರ ಬಹುಮಾನ ಘೋಷಿಸಲಾಗಿದೆ.

ಕಾರ್ಯಕ್ರಮಕ್ಕೆ ಕ್ರಿಕೆಟಿಗ ದಿನೇಶ್ ಕಾರ್ತಿಕ್, ಇಂಟರ್ನ್ಯಾಷನಲ್ ಬಾಕ್ಸರ್ ಹಾಗೂ ಒಲಿಂಪಿಕ್ಸ್ ಪದಕ ವಿಜೇತ ವಿಜೇಂದರ್ ಸಿಂಗ್ , ಮಲಯಾಳಂ ಚಲನಚಿತ್ರ ನಟ ಉನ್ನಿ ಮುಕುಂದನ್ ,ರಿಷಬ್ ಶೆಟ್ಟಿ, ರಾಜ್.ಬಿ ಶೆಟ್ಟಿ ಸೇರಿದಂತೆ ವಿವಿಧ ಚಿತ್ರರಂಗಗಳ ತಾರೆಯರು ಅಲ್ಲದೆ ರಾಜಕೀಯ ನಾಯಕರು ಆಗಮಿಸುವ ನಿರೀಕ್ಷೆಯಿದೆ. ಸುಮಾರು 50 ಸಾವಿರ ಮಂದಿ ಪ್ರೇಕ್ಷಕರಿಗೆ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ, ತುಳುನಾಡಿನ ಹುಲಿವೇಷ ಕಲೆಯ ಮೂಲ ಸ್ವರೂಪವನ್ನು ಉಳಿಸಿ ಬೆಳೆಸುವುದು ಹಾಗೂ ಕರಾವಳಿಯ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಡಾ.ಶಿವಶರಣ್ ಶೆಟ್ಟಿ, ಅವಿನಾಶ್ , ಆನಂದ್ ಶೆಟ್ಟಿ, ವಿಕಾಸ್ ಶೆಟ್ಟಿ, ನವೀನ್ ಶೆಟ್ಟಿ ಎಡ್ಮೆಮಾರ್ ಮತ್ತಿತರರು ಉಪಸ್ಥಿತರಿದ್ದರು

