ಮಂಗಳೂರು: ತುಳು ರಂಗಭೂಮಿಯಲ್ಲಿ ಹೊಸ ಪ್ರಯೋಗಗಳು, ಅದ್ದೂರಿ ರಂಗಸಜ್ಜಿಕೆ ಹಾಗೂ ತಾಂತ್ರಿಕ ವೈವಿಧ್ಯತೆಯ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ವಿಜಯಕುಮಾರ್ ಕೊಡಿಯಾಲ್ ಬೈಲ್ ಇದೀಗ ಮತ್ತೊಂದು ಹೊಸ ನಾಟಕದೊಂದಿಗೆ ರಂಗಪ್ರವೇಶಕ್ಕೆ ಸಜ್ಜಾಗಿದ್ದಾರೆ. ಕಲಾಸಂಗಮದ ಹೊಸ ಕೊಡುಗೆಯಾಗಿ ಮೂಡಿಬರುತ್ತಿರುವ ‘ಶ್ರೀಮತಿ ಸತ್ಯಭಾಮ’ ನಾಟಕದ ಪೋಸ್ಟರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕುತೂಹಲ ಮೂಡಿಸಿದೆ.
ನಾಟಕದ ಶೀರ್ಷಿಕೆಯನ್ನೇ ಸೀರೆ ಮತ್ತು ಆಭರಣಗಳ ವಿನ್ಯಾಸದಲ್ಲಿ ರೂಪಿಸಿರುವುದು ಪೋಸ್ಟರ್ನ ವಿಶೇಷ ಆಕರ್ಷಣೆಯಾಗಿದೆ. ‘Born to Rule’ ಎಂಬ ಅಡಿಬರಹ ಹಾಗೂ ಆತ್ಮವಿಶ್ವಾಸದಿಂದ ನಿಂತಿರುವ ಸತ್ಯಭಾಮೆಯ ಭಂಗಿ ಪಾತ್ರದ ವ್ಯಕ್ತಿತ್ವದ ಬಗ್ಗೆ ಸುಳಿವು ನೀಡುತ್ತದೆ. ‘ಕೈಲಾಸ–ವೈಕುಂಠ ತಿರ್ಗ್ದ್ ಕಲಾಸಂಗಮ ಕುಡ ಭೂಲೋಕೊಗು’ ಎಂಬ ತುಳು ಸಾಲು, ಪೌರಾಣಿಕ ಹಾಗೂ ಐತಿಹಾಸಿಕ ಕಥಾನಕಗಳ ಯಶಸ್ಸಿನ ಬಳಿಕ ಕಲಾಸಂಗಮ ಮತ್ತೆ ಸಾಮಾಜಿಕ ಕಥಾವಸ್ತುವಿನತ್ತ ಹೆಜ್ಜೆ ಇಟ್ಟಿರುವುದನ್ನು ವಿಶಿಷ್ಟವಾಗಿ ಬಿಂಬಿಸುತ್ತದೆ.
ತುಳು ರಂಗಭೂಮಿಯಲ್ಲಿ ಹೊಸತನದ ಪ್ರಯೋಗಗಳಿಗೆ ಹೆಸರಾದ ವಿಜಯಕುಮಾರ್ ಕೊಡಿಯಾಲ್ ಬೈಲ್ ಈ ಹಿಂದೆ ‘ಒರಿಯರ್ದೊರಿ ಅಸಲ್’, ‘ಮದಿಮೆ’, ‘ಕುಟುಂಬ’, ‘ಕೋಡೆ–ಇನಿ–ಎಲ್ಲೆ’ ಹಾಗೂ ‘ಮೈತಿದಿ’ ಸೇರಿದಂತೆ ಹಲವು ಸಾಮಾಜಿಕ ನಾಟಕಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಬಳಿಕ ‘ಶಿವದೂತೆ ಗುಳಿಗೆ’ ನಾಟಕವು ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟರೆ, ‘ಛತ್ರಪತಿ ಶಿವಾಜಿ’ ನಾಟಕವೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಮತ್ತೆ ಸಾಮಾಜಿಕ ಕಥಾಹಂದರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಅವರು ಸಿದ್ಧರಾಗಿದ್ದಾರೆ.
‘ಶ್ರೀಮತಿ ಸತ್ಯಭಾಮ’ ನಾಟಕದ ಪೋಸ್ಟರ್ಗಳು ವಾಟ್ಸ್ಆ್ಯಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನಾಟಕದ ಕುರಿತು ಚರ್ಚೆ ಆರಂಭವಾಗಿದೆ. ಅದರಲ್ಲೂ ಸತ್ಯಭಾಮೆಯ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ. ಪಾತ್ರಧಾರಿಯ ಹೆಸರನ್ನು ಸದ್ಯಕ್ಕೆ ಬಹಿರಂಗಪಡಿಸದಿರುವ ನಿರ್ದೇಶಕರು, ಕಲಾವಿದರ ಆಯ್ಕೆ ಸೇರಿದಂತೆ ಹಲವು ವಿಚಾರಗಳನ್ನು ಗೌಪ್ಯವಾಗಿಟ್ಟಿದ್ದಾರೆ. ಹೀಗಾಗಿ ನಾಟಕದ ಸಂಪೂರ್ಣ ವಿವರ ತಿಳಿಯಲು ರಂಗಾಸಕ್ತರು ಕಾತರದಿಂದ ಕಾಯುತ್ತಿದ್ದಾರೆ.

ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ನಾಟಕಗಳ ಪ್ರಮುಖ ಆಕರ್ಷಣೆಗಳಲ್ಲಿ ಅದ್ದೂರಿ ರಂಗಸಜ್ಜಿಕೆ, ವಿಭಿನ್ನ ದೃಶ್ಯ ಸಂಯೋಜನೆ ಮತ್ತು ಆಧುನಿಕ ತಾಂತ್ರಿಕತೆಯ ಬಳಕೆ ಪ್ರಮುಖವಾಗಿವೆ. ‘ಶಿವದೂತೆ ಗುಳಿಗೆ’ಯ ಯಶಸ್ಸಿನಲ್ಲಿಯೂ ಈ ಅಂಶಗಳು ಮಹತ್ವದ ಪಾತ್ರ ವಹಿಸಿದ್ದವು. ಇದೇ ಪರಂಪರೆಯನ್ನು ‘ಶ್ರೀಮತಿ ಸತ್ಯಭಾಮ’ದಲ್ಲಿಯೂ ಮುಂದುವರಿಸಲು ಅವರು ಸಿದ್ಧತೆ ನಡೆಸಿದ್ದಾರೆ. ನಾಟಕದ ಸಂಗೀತ ನಿರ್ದೇಶನವನ್ನು ಕಲಾಸಂಗಮದ ಯಶಸ್ವಿ ಪ್ರಯೋಗಗಳೊಂದಿಗೆ ಗುರುತಿಸಿಕೊಂಡಿರುವ ಎ.ಕೆ. ವಿಜಯ್ ಕೋಕಿಲಾ ನಿರ್ವಹಿಸಿದ್ದಾರೆ. ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಹಲವು ಯಶಸ್ವಿ ನಾಟಕಗಳಿಗೆ ಸಂಗೀತದ ಮೂಲಕ ಮೆರುಗು ನೀಡಿರುವ ಕೋಕಿಲಾ ಈ ಬಾರಿಯೂ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದ್ದಾರೆ.
ಸದ್ಯ ನಾಟಕದ ರಚನೆ, ನಿರ್ದೇಶನ ಹಾಗೂ ಅಂತಿಮ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿರುವ ವಿಜಯಕುಮಾರ್ ಕೊಡಿಯಾಲ್ ಬೈಲ್, ‘ಶ್ರೀಮತಿ ಸತ್ಯಭಾಮ’ಳನ್ನು ರಂಗದ ಮೇಲೆ ಅನಾವರಣಗೊಳಿಸಲು ಸಜ್ಜಾಗಿದ್ದಾರೆ. ಪೋಸ್ಟರ್ ಮೂಲಕವೇ ಕುತೂಹಲ ಹುಟ್ಟಿಸಿರುವ ಈ ಹೊಸ ಪ್ರಯೋಗವು ತುಳು ರಂಗಭೂಮಿಯಲ್ಲಿ ಯಾವ ರೀತಿಯ ಸಂಚಲನ ಮೂಡಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ನವೆಂಬರ್ 1ರಂದು ಸುರತ್ಕಲ್ನಲ್ಲಿ ಪ್ರದರ್ಶನ

ಕಲಾಸಂಗಮದ ‘ಶ್ರೀಮತಿ ಸತ್ಯಭಾಮ’ ನಾಟಕವು ಅಕ್ಟೋಬರ್ ತಿಂಗಳ ಕೊನೆಯಲ್ಲಿ ಪ್ರದರ್ಶನಗಳೊಂದಿಗೆ ಪ್ರೇಕ್ಷಕರನ್ನು ತಲುಪಲಿದ್ದು, ನವೆಂಬರ್ 1ರಂದು ಭಾನುವಾರ ಸಂಜೆ ಸುರತ್ಕಲ್ನಲ್ಲಿ ಪ್ರದರ್ಶನಗೊಳ್ಳಲಿದೆ. ಅಂದು ನಾಟಕದ ಪ್ರಮುಖ ಕಲಾವಿದರು, ಕಥಾವಸ್ತು ಹಾಗೂ ರಂಗಪ್ರಯೋಗದ ವಿಶೇಷತೆಗಳನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳಬಹುದು. ತುಳು ರಂಗಭೂಮಿಯ ಹೊಸ ಸಾಮಾಜಿಕ ನಾಟಕವನ್ನು ಸ್ವಾಗತಿಸಲು ರಂಗಾಸಕ್ತರು ಸಜ್ಜಾಗಿದ್ದಾರೆ.


