ಕಾರ್ಕಳ: ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕವನ್ನು ಕೇವಲ ಒಂದು ಸಮಾಜಕ್ಕೆ ಸೀಮಿತಗೊಳಿಸದೆ, ಕಾರ್ಕಳದ ಹಬ್ಬವಾಗಿ ಆಚರಿಸಬೇಕು. ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಕರೆ ನೀಡಿದರು.
ಫೆಬ್ರವರಿ 18ರಿಂದ ಹತ್ತು ದಿನಗಳ ಕಾಲ ನಡೆಯಲಿರುವ ಮಹಾಮಸ್ತಕಾಭಿಷೇಕದ ಪೂರ್ವಭಾವಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಮಹಾಮಸ್ತಕಾಭಿಷೇಕದಂತಹ ಪವಿತ್ರ ಧಾರ್ಮಿಕ ಕಾರ್ಯದಲ್ಲಿ ನಾಲ್ಕನೇ ಬಾರಿಗೆ ಸೇವೆ ಸಲ್ಲಿಸುವ ಅವಕಾಶ ಭಗವಂತನ ಅನುಗ್ರಹದಿಂದ ದೊರೆತಿದೆ ಎಂದರು.

“ನಾನು ಆಸ್ಪತ್ರೆಯಲ್ಲಿ ಎಷ್ಟು ದಿನ ಇದ್ದೆ ಎಂಬುದೇ ತಿಳಿಯದ ಸ್ಥಿತಿಯಲ್ಲಿದ್ದೆ. ನನ್ನ ಅರಿವಿಗೂ ಬಾರದಂತೆ 19 ದಿನ ಆಸ್ಪತ್ರೆಯಲ್ಲಿ ಕಳೆದಿದ್ದೆ. ದೇವರ ಆಶೀರ್ವಾದ ಮತ್ತು ಜನರ ಹಾರೈಕೆಯಿಂದ ಗುಣಮುಖನಾಗಿ ಮರಳಿ ಬಂದಿದ್ದೇನೆ. ಇದೀಗ ಈ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಲು ಸಾಧ್ಯವಾಗಿರುವುದು ಸಂತೋಷ ತಂದಿದೆ” ಎಂದು ಡಾ. ರಾಜೇಂದ್ರ ಕುಮಾರ್ ಹೇಳಿದರು.
ಇದೇ ಸಂದರ್ಭದಲ್ಲಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ಆರೋಗ್ಯ ಸುಧಾರಣೆಗಾಗಿ ಸಮಸ್ತ ಜೈನ ಸಮಾಜದ ವತಿಯಿಂದ ಶ್ರೀ ಜೈನಮಠದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು. ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹಾಗೂ ಮುನಿ ಮಹಾರಾಜರು ಆಶೀರ್ವಾದ ನೀಡಿದರು. ಬಳಿಕ ಸಮಾಜದ ವತಿಯಿಂದ ರಾಜೇಂದ್ರ ಕುಮಾರ್ ಅವರಿಗೆ ಶ್ರೀ ದೇವರ ಪ್ರಸಾದವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಅವರು ಶ್ರೀ ಕ್ಷೇತ್ರ ಜೈನಮಠದ ಶ್ರೀ ಕೂಷ್ಮಾಂಡಿನೀ ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಮಹಾಮಸ್ತಕಾಭಿಷೇಕ ಸಮಿತಿಯ ಉಪಾಧ್ಯಕ್ಷರಾದ ರತ್ನಾಕರ್ ರಾಜ್ ಅರಸ್ ಪಡುಬಿದ್ರಿ, ಅನಂತ್ರಾಜ್ ಪುವಣಿ ಹಾಗೂ ಕೋಶಾಧಿಕಾರಿ ಮೋಹನ್ ಪಡಿವಾಳ್ ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಜೈನ್ ಸ್ವಾಗತಿಸಿದರು. ಯೋಗರಾಜ್ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.


