ಬೆಂಗಳೂರು: ನಗರದ ವೈಟ್ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಂದೂರು ಅಗ್ರಹಾರದಲ್ಲಿ ವಕೀಲರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. 42 ವರ್ಷದ ಮಂಜುನಾಥ್ ಹತ್ಯೆಯಾದ ವಕೀಲರಾಗಿದ್ದು, ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಮಂಜುನಾಥ್ ಅವರು ಪತ್ನಿಯೊಂದಿಗೆ ಪಟ್ಟಂದೂರು ಅಗ್ರಹಾರದಲ್ಲಿ ವಾಸವಾಗಿದ್ದರು. ಭಾನುವಾರ ರಾತ್ರಿ ಸುಮಾರು 11.30ರಿಂದ 12 ಗಂಟೆಯ ನಡುವಿನ ಅವಧಿಯಲ್ಲಿ ದುಷ್ಕರ್ಮಿಗಳು ಅವರ ಮನೆಗೆ ಬಂದಿದ್ದಾರೆ ಎನ್ನಲಾಗಿದೆ. ಈ ವೇಳೆ ಮಂಜುನಾಥ್ ಅವರನ್ನು ಮನೆಯ ಹೊರಗೆ ಕರೆಸಿಕೊಂಡು, ತಲೆಗೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಮಂಜುನಾಥ್ ಅವರ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ಬಿಹಾರ ಮೂಲದ ವ್ಯಕ್ತಿಗಳೊಂದಿಗೆ ಬಾಡಿಗೆ ಹಣದ ವಿಚಾರವಾಗಿ ವಿವಾದ ಉಂಟಾಗಿತ್ತೆಂಬ ಶಂಕೆ ವ್ಯಕ್ತವಾಗಿದೆ. ಇದೇ ವೇಳೆ ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಹತ್ಯೆ ನಡೆದಿರಬಹುದೆಂಬ ಅನುಮಾನವೂ ತನಿಖೆಯ ಸಂದರ್ಭದಲ್ಲಿ ಕೇಳಿಬಂದಿದೆ. ಆದರೆ, ಹತ್ಯೆಗೆ ನಿಖರವಾದ ಕಾರಣ ಇನ್ನೂ ಖಚಿತವಾಗಿಲ್ಲ.
ವೃತ್ತಿಯಲ್ಲಿ ವಕೀಲರಾಗಿದ್ದ ಮಂಜುನಾಥ್ ಅವರು ಆ ಪ್ರದೇಶದಲ್ಲಿ ಪ್ರಭಾವಿ ಜಮೀನು ಮಾಲೀಕರಾಗಿಯೂ ಗುರುತಿಸಿಕೊಂಡಿದ್ದರು ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದಾರೆ. ಹತ್ಯೆಯ ಹಿಂದಿನ ಉದ್ದೇಶ ಹಾಗೂ ಆರೋಪಿಗಳ ಗುರುತು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.


