ಮಂಗಳೂರು: ಕಡಬ ತಾಲೂಕಿನ ಆಲಂಕಾರಿನಲ್ಲಿ ಐರನ್ ಟೆಂಪಲ್ ಸೇವಾ ಟ್ರಸ್ಟ್ ವತಿಯಿಂದ ಅಕ್ಟೋಬರ್ 25ರಂದು ‘ಮಿಸ್ಟರ್ ದಕ್ಷಿಣ ಕನ್ನಡ-2026’ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ನಡೆಯಲಿದೆ. ಜಿಲ್ಲೆಯ 250ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆಯಿದ್ದು, ವಿವಿಧ ವಿಭಾಗಗಳ ವಿಜೇತರಿಗೆ ₹3 ಲಕ್ಷಕ್ಕೂ ಅಧಿಕ ಮೊತ್ತದ ಬಹುಮಾನ, ಟ್ರೋಫಿ ಹಾಗೂ ಪದಕಗಳನ್ನು ನೀಡಲಾಗುವುದು. ಪ್ರಮುಖ ವಿಭಾಗದ ವಿಜೇತರಿಗೆ ₹1 ಲಕ್ಷ ಬಹುಮಾನ ನೀಡಲು ಉದ್ದೇಶಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಜನಾರ್ಧನ ಗೌಡ ಕಯ್ಯಪೆ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೀಡಾ ಪ್ರೋತ್ಸಾಹದ ಜತೆಗೆ ಸಮಾಜಮುಖಿ ಕಾರ್ಯದ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದ ವೆಚ್ಚ ಭರಿಸಿದ ಬಳಿಕ ಉಳಿಯುವ ಮೊತ್ತವನ್ನು ತಂದೆ ಹಾಗೂ ಪತಿಯ ಆಸರೆಯಿಲ್ಲದೆ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಜೀವನ ನಡೆಸುತ್ತಿರುವ ಆಲಂಕಾರಿನ ಬಡ ಕುಟುಂಬವೊಂದಕ್ಕೆ ಮನೆ ನಿರ್ಮಿಸಲು ನೀಡಲಾಗುವುದು. ಕಾರ್ಯಕ್ರಮಕ್ಕೆ ಸುಮಾರು ₹15 ಲಕ್ಷ ವೆಚ್ಚ ನಿರೀಕ್ಷಿಸಲಾಗಿದೆ ಎಂದರು .
ಅ.25ರಂದು ಅಪರಾಹ್ನ 2.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ರಾಷ್ಟ್ರೀಯ ದೇಹದಾರ್ಢ್ಯ ಪಟು ಶಶಿಕಾಂತ್ ಉಳ್ಳಾಲ್ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ. ಪಟ್ಲ ಫೌಂಡೇಶನ್ ಅಧ್ಯಕ್ಷ ಸತೀಶ್ ಪಟ್ಲ ಸೇವಾನಿಧಿ ಉದ್ಘಾಟಿಸಲಿದ್ದಾರೆ. ಸಂಜೆ 6.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷ್ಣ ಶೆಟ್ಟಿ ಕಡಬ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ನ ಪ್ರಮುಖರಾದ ರಾಜೇಶ್ ಆಳ್ವ, ಶಶಿಕಾಂತ್ ಉಳ್ಳಾಲ್, ಹರ್ಷಿತ್ ಹಾಗೂ ಅಕ್ಷಯ್ ಉಪಸ್ಥಿತರಿದ್ದರು


