ಮಂಗಳೂರು: ಮಂಗಳೂರು ದಸರಾ ಮಹೋತ್ಸವದ ಅಂಗವಾಗಿ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಅಕ್ಟೋಬರ್ 21ರ ಬುಧವಾರ ಸಂಜೆ ದೇವರ ಮೆರವಣಿಗೆ ಹಾಗೂ ವಿವಿಧ ಟ್ಯಾಬ್ಲೋಗಳ ಶೋಭಾಯಾತ್ರೆ ನಡೆಯಲಿರುವ ಹಿನ್ನೆಲೆಯಲ್ಲಿ ನಗರದಲ್ಲಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಇಲಾಖೆ ತಿಳಿಸಿದೆ.
ಮೆರವಣಿಗೆಯು ಅಕ್ಟೋಬರ್ 21ರ ಸಂಜೆ 4 ಗಂಟೆಯಿಂದ ಅಕ್ಟೋಬರ್ 22ರ ಬೆಳಗ್ಗೆ 6 ಗಂಟೆಯವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. ಸಾರ್ವಜನಿಕರ ಸುಗಮ ಸಂಚಾರ ಮತ್ತು ಸುರಕ್ಷತೆಯ ದೃಷ್ಟಿಯಿಂದ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಮೆರವಣಿಗೆಯ ಮಾರ್ಗ
ಕುದ್ರೋಳಿ ದೇವಸ್ಥಾನದ ದ್ವಾರದಿಂದ ಆರಂಭವಾಗುವ ಮೆರವಣಿಗೆ ಮಣ್ಣಗುಡ್ಡೆ ಜಂಕ್ಷನ್, ನಾರಾಯಣಗುರು ವೃತ್ತ (ಲೇಡಿಹಿಲ್), ಲಾಲ್ಬಾಗ್, ಬಳ್ಳಾಲ್ಬಾಗ್, ಪಿವಿಎಸ್ ಜಂಕ್ಷನ್, ನವಭಾರತ ವೃತ್ತ, ಸಿಟಿ ಸೆಂಟರ್, ಹಂಪನಕಟ್ಟೆ, ಕೆ.ಬಿ. ಕಟ್ಟೆ, ಕಾರ್ಸ್ಟ್ರೀಟ್ ಹಾಗೂ ನ್ಯೂಚಿತ್ರಾ ಜಂಕ್ಷನ್ ಮೂಲಕ ಮತ್ತೆ ಕುದ್ರೋಳಿ ದೇವಸ್ಥಾನವನ್ನು ತಲುಪಲಿದೆ.
ಮೆರವಣಿಗೆಯ ಹಿನ್ನೆಲೆಯಲ್ಲಿ ಅಕ್ಟೋಬರ್ 21ರಂದು ಮಧ್ಯಾಹ್ನ 2 ಗಂಟೆಯಿಂದಲೇ ನಗರದ ವಿವಿಧ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಮೆರವಣಿಗೆಯ ಮಾರ್ಗದಲ್ಲಿ ವಾಹನಗಳನ್ನು ನಿಲುಗಡೆ ಮಾಡದಂತೆ ಪೊಲೀಸ್ ಇಲಾಖೆ ಸೂಚಿಸಿದೆ.
ಪರ್ಯಾಯ ಮಾರ್ಗಗಳ ವಿವರ
ಕೊಟ್ಟಾರ ಚೌಕಿ ಕಡೆಯಿಂದ ನಗರಕ್ಕೆ ಬರುವವರು: ಲೇಡಿಹಿಲ್ ಮಾರ್ಗದ ಬದಲಾಗಿ ಕುಂಟಿಕಾನ–ಕೆಪಿಟಿ–ನಂತೂರು ಮಾರ್ಗವನ್ನು ಬಳಸಬೇಕು.
ಬಂಟ್ಸ್ ಹಾಸ್ಟೆಲ್ನಿಂದ ಪಿವಿಎಸ್ ಮೂಲಕ ಎಂ.ಜಿ. ರಸ್ತೆಗೆ ತೆರಳುವವರು: ಬಂಟ್ಸ್ ಹಾಸ್ಟೆಲ್–ಭಾರತ್ ಬೀಡಿ–ಬಟ್ಟಗುಡ್ಡ–ಕೆಪಿಟಿ ಅಥವಾ ಬಂಟ್ಸ್ ಹಾಸ್ಟೆಲ್–ಭಾರತ್ ಬೀಡಿ–ಮಲ್ಲಿಕಟ್ಟೆ ಮಾರ್ಗದಲ್ಲಿ ಸಂಚರಿಸಬೇಕು.
ಕೆಎಸ್ಆರ್ಟಿಸಿ ಜಂಕ್ಷನ್ನಿಂದ ಲಾಲ್ಬಾಗ್ ಕಡೆಗೆ ತೆರಳುವವರು: ಕಾಪಿಕಾಡ್–ಕುಂಟಿಕಾನ ಅಥವಾ ಬಿಜೈ–ಬಟ್ಟಗುಡ್ಡ ಮಾರ್ಗವನ್ನು ಅನುಸರಿಸಬೇಕು. ಕೆಎಸ್ಆರ್ಟಿಸಿ ಬಸ್ಗಳೂ ಇದೇ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲಿವೆ.
ಹಂಪನಕಟ್ಟೆಯಿಂದ ಪಿವಿಎಸ್ ಕಡೆಗೆ ತೆರಳುವವರು: ಕೆ.ಎಸ್. ರಾವ್ ರಸ್ತೆ–ನವಭಾರತ ವೃತ್ತದ ಬದಲಾಗಿ ಹಂಪನಕಟ್ಟೆ–ಎಲ್.ಎಚ್.ಎಚ್.–ಅಂಬೇಡ್ಕರ್ ಜಂಕ್ಷನ್ ಮಾರ್ಗವನ್ನು ಬಳಸಬೇಕು.
ನ್ಯೂಚಿತ್ರಾ ಜಂಕ್ಷನ್ನಿಂದ ನವಭಾರತ ವೃತ್ತದ ಕಡೆಗೆ ತೆರಳುವವರು: ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕು.
ಲೇಡಿಹಿಲ್ನ ನಾರಾಯಣಗುರು ವೃತ್ತದಿಂದ ಮಣ್ಣಗುಡ್ಡೆ ಜಂಕ್ಷನ್, ದುರ್ಗಾಮಹಲ್ ಹಾಗೂ ಕುದ್ರೋಳಿ ದೇವಸ್ಥಾನದ ಕಡೆಗೆ ತೆರಳುವ ವಾಹನಗಳು: ಪರ್ಯಾಯ ಮಾರ್ಗಗಳನ್ನು ಅನುಸರಿಸಬೇಕು.

ಮೆರವಣಿಗೆ ವೀಕ್ಷಕರಿಗೆ ಪಾರ್ಕಿಂಗ್ ವ್ಯವಸ್ಥೆ
ದಸರಾ ಮೆರವಣಿಗೆಯನ್ನು ವೀಕ್ಷಿಸಲು ಆಗಮಿಸುವ ಸಾರ್ವಜನಿಕರು ತಮ್ಮ ವಾಹನಗಳನ್ನು ಪೊಲೀಸ್ ಇಲಾಖೆ ನಿಗದಿಪಡಿಸಿರುವ ಸ್ಥಳಗಳಲ್ಲಿ ಮಾತ್ರ ನಿಲುಗಡೆ ಮಾಡಬೇಕು. ಪಾರ್ಕಿಂಗ್ಗಾಗಿ ಈ ಕೆಳಗಿನ ಸ್ಥಳಗಳನ್ನು ಗುರುತಿಸಲಾಗಿದೆ:
ಕರಾವಳಿ ಮೈದಾನ
ಅಳಕೆ ಮಾರ್ಕೆಟ್
ಉರ್ವ ಮಾರ್ಕೆಟ್ ಮೈದಾನ
ಉರ್ವ ಕೆನರಾ ಶಾಲೆ
ಕೆನರಾ ಡೊಂಗರಕೇರಿ ಶಾಲೆ
ಪೊಂಪೈ ಚರ್ಚ್
ದುರ್ಗಾಮಹಲ್ ಹೋಟೆಲ್
ಕುದ್ರೋಳಿ ನಾರಾಯಣ ಕಾಲೇಜು
ಬಿ.ಇ.ಎಂ. ಶಾಲೆ
ಸರ್ಕಾರಿ ಹೆಣ್ಣುಮಕ್ಕಳ ಪ್ರೌಢಶಾಲೆ, ಕಾರ್ಸ್ಟ್ರೀಟ್
ಹೋಟೆಲ್ ವಿಮಲೇಶ್
ಮೆರವಣಿಗೆಯ ಮಾರ್ಗದಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆಯಿರುವುದರಿಂದ ಸಾರ್ವಜನಿಕರು ನಿಗದಿತ ಪಾರ್ಕಿಂಗ್ ಸ್ಥಳಗಳನ್ನೇ ಬಳಸಬೇಕು. ಸಂಚಾರ ನಿಯಮಗಳನ್ನು ಪಾಲಿಸಿ, ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.


