ಕಾಸರಗೋಡು: ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಕೇವಲ ಭಾಷಣಗಳಿಂದ ಉಳಿಸಲು ಸಾಧ್ಯವಿಲ್ಲ. ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಮಾತ್ರ ಅವುಗಳ ಉಳಿವು ಮತ್ತು ಬೆಳವಣಿಗೆ ಸಾಧ್ಯ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಡಾ. ಎಂ.ಜಿ.ಆರ್.ಅರಸ್ ಹೇಳಿದರು.
ಕಾಸರಗೋಡು ಕನ್ನಡ ಭವನ ಮತ್ತು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಾಂಸ್ಕೃತಿಕ ಘಟಕದ ಸಂಯುಕ್ತ ಆಶ್ರಯದಲ್ಲಿ ಅ.18ರಂದು ಪಾಂಗೋಡಿನ ದೇವಸ್ಥಾನದ ದುರ್ಗಾಂಬಾ ವೇದಿಕೆಯಲ್ಲಿ ನಡೆದ ಕಾಸರಗೋಡು ದಸರಾ ರಾಷ್ಟ್ರೀಯ ಕವಿ ಸಮ್ಮೇಳನ-2026 ಉದ್ಘಾಟಿಸಿ ಅವರು ಮಾತನಾಡಿದರು.
ಕಾವ್ಯ, ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಆಸಕ್ತಿಯಿದ್ದರೂ ಅವಕಾಶ ವಂಚಿತರಾದವರನ್ನು ಗುರುತಿಸಿ ಮುನ್ನೆಲೆಗೆ ತರುವ ಮೂಲಕ ಸಶಕ್ತ ಸಾಂಸ್ಕೃತಿಕ ಸಮಾಜ ನಿರ್ಮಿಸಬಹುದು. ಈ ನಿಟ್ಟಿನಲ್ಲಿ ಡಾ. ವಾಮನ್ ರಾವ್ ಬೇಕಲ್ ಅವರ ನೇತೃತ್ವದಲ್ಲಿ ಕನ್ನಡ ಭವನ ನಡೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮ್ಮೇಳನದ ಸರ್ವಾಧ್ಯಕ್ಷ ಬಿ. ಶ್ರೀನಿವಾಸ್ ಬಹದ್ದೂರ್ ಮಾತನಾಡಿ, ಸುಮಾರು 60 ಅಂತಾರಾಜ್ಯ ಕವಿಗಳಿಗೆ ಕಾಸರಗೋಡು ದಸರಾ ರಾಷ್ಟ್ರೀಯ ಕವಿ ಸಾಧಕ ಪ್ರಶಸ್ತಿ ಹಾಗೂ 10 ಮಂದಿಗೆ ನಾಡೋಜ ಡಾ.ಕಯ್ಯಾರ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ.ಜಯಪ್ಪ ಹೊನ್ನಾಳಿ (ಜಯಕವಿ ಮೈಸೂರು) ಅವರು, ಗಡಿನಾಡಿನಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಶ್ರಮಿಸುತ್ತಿರುವ ವಾಮನ್ ರಾವ್ ಬೇಕಲ್ ಅವರ ಸೇವೆಯನ್ನು ಕರ್ನಾಟಕ ಸರಕಾರ ಗುರುತಿಸಿ ಪುರಸ್ಕರಿಸಬೇಕು ಎಂದು ಹೇಳಿದರು.
ಮೈಸೂರು ರಾಜವಂಶದ ಜೆ.ಪಿ.ಅರಸ್ ಕನ್ನಡ ಮೆರವಣಿಗೆ ಉದ್ಘಾಟಿಸಿದರು. ಇರಾ ನೇಮು ಪೂಜಾರಿ, ಡಾ.ಸುರೇಶ್ ನೆಗಳಗುಳಿ, ಡಾ.ಕೊಳಚಪ್ಪೆ ಗೋವಿಂದ ಭಟ್, ಪ್ರದೀಪ್ ಕುಮಾರ್, ಸೀತಾಲಕ್ಷ್ಮಿ ವರ್ಮ, ಗೊರೂರು ಪಂಕಜ, ರಾಜೇಶ್ ಕೋಟೆಕಣಿ, ಜಯಾನಂದ ಪೆರಾಜೆ ಉಪಸ್ಥಿತರಿದ್ದರು. ಸಂಧ್ಯಾ ರಾಣಿ ಟೀಚರ್ ಸ್ವಾಗತಿಸಿದರು. ಗೊರೂರು ಪಂಕಜ ನಿರೂಪಿಸಿದರು. ವಸಂತ್ ಕೆರೆಮನೆ ವಂದಿಸಿದರು.


