ಮಂಗಳೂರು, ಅ. 17: ಆರ್ಥಿಕ ಸಂಕಷ್ಟದಲ್ಲಿರುವ ಕ್ಯಾನ್ಸರ್ ರೋಗಿಗಳಿಗೂ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಲಭ್ಯವಾಗಬೇಕು ಮತ್ತು ಪ್ರತಿಯೊಬ್ಬ ರೋಗಿಯನ್ನೂ ಗೌರವದಿಂದ ಕಾಣಬೇಕು ಎಂಬ ಮಾನವೀಯ ಸಂದೇಶದೊಂದಿಗೆ ಮಂಗಳೂರಿನ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ (ಎಂಐಒ) ಆಸ್ಪತ್ರೆಯಲ್ಲಿ ವಿಶಿಷ್ಟ ಆಯುಧ ಪೂಜೆ ನಡೆಯಿತು.
ಆಸ್ಪತ್ರೆಯಲ್ಲಿ ಹೊಸದಾಗಿ ಅಳವಡಿಸಲಾಗಿರುವ ಒಟ್ಟು ₹35 ಕೋಟಿ ಮೌಲ್ಯದ ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸಾ ಉಪಕರಣಗಳಿಗೆ ಇಬ್ಬರು ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳ ಸದಸ್ಯರು ಪೂಜೆ ಸಲ್ಲಿಸಿದ್ದು, ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಸಾಮಾನ್ಯವಾಗಿ ಆಸ್ಪತ್ರೆಯ ಆಡಳಿತ ಮಂಡಳಿ ಅಥವಾ ವೈದ್ಯರು ನೆರವೇರಿಸುವ ಪೂಜೆಯನ್ನು ಈ ಬಾರಿ ಬಿಪಿಎಲ್ ಕುಟುಂಬಗಳ ಸದಸ್ಯರಿಗೆ ಅವಕಾಶ ನೀಡುವ ಮೂಲಕ ವಿಭಿನ್ನವಾಗಿ ಆಚರಿಸಲಾಯಿತು.

ಕ್ಯಾನ್ಸರ್ ಚಿಕಿತ್ಸಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಆಸ್ಪತ್ರೆಯಲ್ಲಿ ₹25 ಕೋಟಿ ವೆಚ್ಚದ ಅತ್ಯಾಧುನಿಕ ಟ್ರೂಬೀಮ್ ರೇಡಿಯೊಥೆರಪಿ ವ್ಯವಸ್ಥೆ ಹಾಗೂ ₹10 ಕೋಟಿ ವೆಚ್ಚದ ಪಿಇಟಿ-ಸಿಟಿ ಸ್ಕ್ಯಾನರ್ ಅಳವಡಿಸಲಾಗಿದೆ. ಈ ಉಪಕರಣಗಳು ಕ್ಯಾನ್ಸರ್ ರೋಗನಿರ್ಣಯ ಮತ್ತು ಚಿಕಿತ್ಸೆಯ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ.
ಎಂಐಒ ಆಸ್ಪತ್ರೆಯ ವೈದ್ಯಕೀಯ ಮತ್ತು ಆಡಳಿತ ವಿಭಾಗದ ನಿರ್ದೇಶಕ ಡಾ. ಸುರೇಶ್ ರಾವ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ರೋಗಿಯ ಆರ್ಥಿಕ ಸ್ಥಿತಿಗತಿ ಅವರ ಘನತೆ ಅಥವಾ ಗೌರವವನ್ನು ನಿರ್ಧರಿಸಬಾರದು. ಹಣಕಾಸಿನ ಸಮಸ್ಯೆಯಿಂದಾಗಿ ಯಾರೂ ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆಯಿಂದ ವಂಚಿತರಾಗಬಾರದು ಎಂಬ ಆಶಯವನ್ನು ಈ ಉಪಕ್ರಮ ಪ್ರತಿಬಿಂಬಿಸಿತು.
ಜೀವ ಉಳಿಸುವ ಮತ್ತು ರೋಗಿಗಳಲ್ಲಿ ಹೊಸ ಭರವಸೆ ಮೂಡಿಸುವ ವೈದ್ಯಕೀಯ ಉಪಕರಣಗಳಿಗೆ ಆಯುಧ ಪೂಜೆ ನೆರವೇರಿಸುವ ಮೂಲಕ, ವೈದ್ಯಕೀಯ ಸೇವೆಯಲ್ಲಿ ಮಾನವೀಯತೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಮಹತ್ವವನ್ನು ಸಾರಲಾಯಿತು.
ಈ ಸಂದರ್ಭದಲ್ಲಿ ರಶ್ಮಿ ಮತ್ತು ಪ್ರದೀಪ್ ಕುಮಾರ್ ಹಾಗೂ ಸವಿತಾ ಮತ್ತು ಲಕ್ಷ್ಮಣ್ ಗೌಡ ಅವರ ಕುಟುಂಬದ ಸದಸ್ಯರು ಪೂಜೆಯಲ್ಲಿ ಪಾಲ್ಗೊಂಡರು. ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಹೊಂದುವುದರ ಜೊತೆಗೆ ಬಡ ರೋಗಿಗಳಿಗೆ ಸಮಾನ ಗೌರವ ಮತ್ತು ಘನತೆ ನೀಡುವುದು ಆರೋಗ್ಯ ಸೇವೆಯ ಪ್ರಮುಖ ಆಶಯವಾಗಬೇಕು ಎಂಬ ಸಂದೇಶವನ್ನು ಕಾರ್ಯಕ್ರಮ ನೀಡಿತು.
ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರಿಗೆ ಆಧುನಿಕ, ಕೈಗೆಟುಕುವ ಹಾಗೂ ಮಾನವೀಯ ನೆಲೆಯಲ್ಲಿ ಕ್ಯಾನ್ಸರ್ ಚಿಕಿತ್ಸೆ ಒದಗಿಸುವ ತನ್ನ ಬದ್ಧತೆಯನ್ನು ಈ ಕಾರ್ಯಕ್ರಮದ ಮೂಲಕ ಎಂಐಒ ಆಸ್ಪತ್ರೆ ಪುನರುಚ್ಚರಿಸಿದೆ.


