ಮಂಗಳೂರು : ಪ್ರತಿಯೊಬ್ಬ ವ್ಯಕ್ತಿಯು ಬಡ ಜನರಿಗೆ ಮಾಡುವ ಸೇವೆಯೇ ದೇವರಿಗೆ ಕಟ್ಟುವ ತೆರಿಗೆ. ಜನಸೇವೆಯು ಉಪಕಾರವಾಗುವುದಿಲ್ಲ ಅದನ್ನು ದೇವರಿಗೆ ಕಟ್ಟುವ ತೆರಿಗೆ ಎಂದು ಪರಿಗಣಿಸಬೇಕು ಇದು ಮಧ್ವಾಚಾರ್ಯರು ಕೊಟ್ಟಿರುವ ಸಂದೇಶ ಎಂದು ಉಡುಪಿಯ ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕರಾದ ಡಾ.ರಾಜಗೋಪಾಲಾಚಾರ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ತತ್ವವಾದ ಸಿದ್ದಾಂತ ಪ್ರತಿಪಾದಕರಾದ ಶ್ರೀ ಮಧ್ವಾಚಾರ್ಯ ಜಯಂತಿ ಕಾರ್ಯಕ್ರಮ ತುಳುಭವನ ಮಂಗಳೂರಿನಲ್ಲಿ ಇಂದು ಅಕ್ಟೊಬರ್ 21ರಂದು ಜರುಗಿತು. ಈ ಸಂದರ್ಭ ಶ್ರೀ ಮಧ್ವಾಚಾರ್ಯರ ಸಾಧನೆಗಳು ಹಾಗೂ ಅವರ ಸಂದೇಶದ ಕುರಿತು ಡಾ.ರಾಜಗೊಪಾಲಾಚಾರ್ ಉಪನ್ಯಾಸ ನೀಡಿದರು.

ಮಧ್ವಾಚಾರ್ಯರು ಈ ನಾಡು ಕಂಡ ಶ್ರೇಷ್ಠ ದಾರ್ಶನಿಕರು ಹಾಗೂ ಅವರು ಬಡವ ಬಲ್ಲಿದ ಭೇದವಿಲ್ಲದೆ ಜಾತಿ ಧರ್ಮವ ಮೀರಿ ಎಲ್ಲರ ಏಳಿಗೆಯನ್ನು ಬಯಸುತ್ತಿದ್ದರು ಎಂದು ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಇದರ ಅಧ್ಯಕ್ಷರಾದ ಶ್ರೀ ಟಿ ಎಮ್ ಶಾಹಿದ್ ತೆಕ್ಕಿಲ್ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಯಂತಿ ಆಚರಣೆ ಸಮಾಜದ ಎಲ್ಲಾ ವರ್ಗಗಳ ಬಾಂಧವ್ಯಕ್ಕೆ ಸಹಕಾರಿಯಾಗಬೇಕು ಎಂದರು.
ಇದೆ ಸಂದರ್ಭದಲ್ಲಿ ಶ್ರೀ ಮಧ್ಚಾಚಾರ್ಯ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆಯ ನುಡಿನಮನ ಸಲ್ಲಿಸಲಾಯಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ತಾರಾನಾಥ ಗಟ್ಟಿ ಕಾಫಿಕಾಡ್ ಇವರು ಮಾತನಾಡಿ ಮಧ್ವಾಚಾರ್ಯರು ತುಳವರು ಹಾಗೂ ತುಳು ಭಾಷೆಯ ಬೆಳವಣಿಗೆಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀ ರಾಜೇಶ್ ಜಿ. ಸ್ವಾಗತಿಸಿದರು. ಕರ್ನಾಟಕ ಧಾರ್ಮಿಕ ಪರಿಷತ್ ಜಿಲ್ಲಾ ಸಮಿತಿ ಸದಸ್ಯ ಶ್ರೀ ಸುಬ್ರಹ್ಮಣ್ಯ ಪ್ರಸಾದ್ ಕೊರಿಯಾರ್ ಧನ್ಯವಾದ ಅರ್ಪಿಸಿದರು. ಶ್ರೀ ಗಣೇಶ್ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.

