ವಿಜಯಪುರ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಭೇಟಿಯ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಕೇಳಿಬಂದಿದ್ದ ಸಂಧಾನದ ಊಹಾಪೋಹಗಳಿಗೆ ಯತ್ನಾಳ್ ತೆರೆ ಎಳೆದಿದ್ದಾರೆ. ವಿಜಯೇಂದ್ರ ಅವರೊಂದಿಗೆ ಯಾವುದೇ ರಾಜಕೀಯ ಹೊಂದಾಣಿಕೆ ಮಾತುಕತೆ ನಡೆದಿಲ್ಲ. ಅವರ ನಾಯಕತ್ವ ಬದಲಾದ ಬಳಿಕವಷ್ಟೇ ಮುಂದಿನ ಬೆಳವಣಿಗೆಗಳ ಬಗ್ಗೆ ಮಾತನಾಡಬಹುದು ಎಂದು ಯತ್ನಾಳ್ ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಮನೆಗೆ ತೆರಳಿದ್ದ ಸಂದರ್ಭದಲ್ಲಿ ವಿಜಯೇಂದ್ರ ಕೂಡ ಅಲ್ಲಿಗೆ ಬಂದಿದ್ದರು. ಈ ವೇಳೆ ಕಾಫಿ ಕುಡಿಯುತ್ತಾ ಪರಸ್ಪರ ಸಾಮಾನ್ಯವಾಗಿ ಮಾತನಾಡಿದ್ದೇವೆ. ಇದನ್ನು ಹೊರತುಪಡಿಸಿ ಯಾವುದೇ ರಾಜಕೀಯ ಚರ್ಚೆ ಅಥವಾ ಸಂಧಾನದ ಮಾತುಕತೆ ನಡೆದಿಲ್ಲ ಎಂದು ಅವರು ತಿಳಿಸಿದ್ದಾರೆ.
ವಿಜಯೇಂದ್ರ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ ಯತ್ನಾಳ್, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಾವು ನೀಡಿದ್ದ ಪತ್ರಗಳನ್ನು ಹರಿದು ಹಾಕಲಾಗಿತ್ತು. ತಮ್ಮ ಕ್ಷೇತ್ರಕ್ಕೆ ಅನುದಾನ ದೊರೆಯದಂತೆ ತಡೆಯಲಾಗಿತ್ತು. ತಮ್ಮನ್ನು ರಾಜಕೀಯವಾಗಿ ಹತ್ತಿಕ್ಕುವ ಪ್ರಯತ್ನಗಳೂ ನಡೆದಿದ್ದವು ಎಂದು ದೂರಿದ್ದಾರೆ.
ವಿಜಯೇಂದ್ರ ಅವರೊಂದಿಗೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿವೆ ಎಂದು ಹೇಳಿದ ಯತ್ನಾಳ್, ತಮ್ಮ ನಡುವಿನ ಸಂಬಂಧದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ನಾಯಕತ್ವ ಬದಲಾವಣೆ ಆಗುವವರೆಗೆ ಬಿಜೆಪಿ ಸೇರ್ಪಡೆ ಕುರಿತು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂಬ ಸಂದೇಶವನ್ನೂ ನೀಡಿದ್ದಾರೆ.
ಸೂಕ್ತ ಸ್ಥಾನಮಾನ ನೀಡಿದರೆ ಮಾತ್ರ ಬಿಜೆಪಿಗೆ ಮರಳುವೆ
ಸಂಸತ್ನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಆಹ್ವಾನಿಸಿರುವ ಹಿನ್ನೆಲೆಯಲ್ಲಿ ದೆಹಲಿಗೆ ತೆರಳುತ್ತಿರುವುದಾಗಿ ಯತ್ನಾಳ್ ತಿಳಿಸಿದ್ದಾರೆ. ಈ ಭೇಟಿಯ ವೇಳೆ ಯಾವುದೇ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗುವ ಉದ್ದೇಶವಿಲ್ಲ. ಕಬ್ಬು ಬೆಳೆಗಾರರ ಹೋರಾಟಕ್ಕೆ ಸಂಬಂಧಿಸಿದಂತೆ ಸಚಿವರೊಂದಿಗೆ ಚರ್ಚೆ ನಡೆಸಲಿದ್ದೇನೆ ಎಂದು ಹೇಳಿದ್ದಾರೆ.
ತಾವು ಬಿಜೆಪಿಗೆ ಮರಳುವ ಕುರಿತು ದೆಹಲಿ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಿದರೆ ಮಾತ್ರ ಮರಳುವ ಬಗ್ಗೆ ಯೋಚಿಸುವುದಾಗಿ ತಿಳಿಸಿದ್ದಾರೆ. ಇಲ್ಲದಿದ್ದರೆ ತಮ್ಮ ಮುಂದಿನ ರಾಜಕೀಯ ಹಾದಿಗೆ ಬೇರೆ ಆಯ್ಕೆಗಳಿವೆ ಎಂಬರ್ಥದಲ್ಲಿ ‘ಸ್ಥಾನಮಾನ ಕೊಟ್ಟರೆ ಬಿಜೆಪಿ, ಇಲ್ಲದಿದ್ದರೆ ಜೆಸಿಬಿ ಇದ್ದೇ ಇದೆಯಲ್ಲ’ ಎಂದು ಹೇಳುವ ಮೂಲಕ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.
ಯತ್ನಾಳ್ ಅವರ ಈ ಹೇಳಿಕೆಯಿಂದ ಬಿಜೆಪಿ ಸೇರ್ಪಡೆ ಕುರಿತ ಚರ್ಚೆಗೆ ಮತ್ತಷ್ಟು ಸ್ಪಷ್ಟತೆ ಸಿಕ್ಕಿದ್ದು, ರಾಜ್ಯ ಬಿಜೆಪಿಯಲ್ಲಿನ ನಾಯಕತ್ವದ ವಿಚಾರದಲ್ಲಿ ಅವರ ನಿಲುವು ಬದಲಾಗಿಲ್ಲ ಎಂಬುದು ವ್ಯಕ್ತವಾಗಿದೆ

