ನೆಲ್ಯಾಡಿ : ಕಡಬ ತಾಲೂಕಿನ ನೆಲ್ಯಾಡಿಯಲ್ಲಿ ನಿಂತಿದ್ದ ಟ್ಯಾಂಕರ್ ಲಾರಿಯ ಹಿಂಭಾಗಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಸಹಪ್ರಯಾಣಿಕ ಮೃತಪಟ್ಟಿದ್ದು, ಚಾಲಕ ಗಾಯಗೊಂಡ ಘಟನೆ ಅಕ್ಟೋಬರ್ 22ರ ತಡರಾತ್ರಿ ನಡೆದಿದೆ.
ನೆಲ್ಯಾಡಿ ಗ್ರಾಮದ ಐಟಿಐ ಕಾಲೇಜಿನ ಮುಂಭಾಗ, ಹಾಸನದಿಂದ ಮಂಗಳೂರು ಕಡೆಗೆ ಸಾಗುವ ಏಕಮುಖ ಹೆದ್ದಾರಿಯ ಬದಿಯಲ್ಲಿ ಟಿಎನ್-88-ಎ-9477 ನೋಂದಣಿ ಸಂಖ್ಯೆಯ ಟ್ಯಾಂಕರ್ ಲಾರಿ ನಿಂತಿತ್ತು. ಈ ವೇಳೆ ಹಾಸನ ಕಡೆಯಿಂದ ಬಂದ ಕೆಎ-22-ಎಂಎ-5270 ನೋಂದಣಿ ಸಂಖ್ಯೆಯ ಕಾರು ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಚಾಲಕ ಹಾಗೂ ಸಹಪ್ರಯಾಣಿಕ ಗಾಯಗೊಂಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಪಿರ್ಯಾದಿದಾರರಾದ ನೆಲ್ಯಾಡಿ ನಿವಾಸಿ ವಿ.ಜೆ. ಜೋಸೆಫ್ (55) ಅವರು ಸಾರ್ವಜನಿಕರ ನೆರವಿನೊಂದಿಗೆ ಗಾಯಾಳುಗಳನ್ನು ನೆಲ್ಯಾಡಿಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆಸ್ಪತ್ರೆಯಲ್ಲಿ ಸಹಪ್ರಯಾಣಿಕನನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಗಾಯಗೊಂಡ ಕಾರಿನ ಚಾಲಕನನ್ನು ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 138/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 281 ಮತ್ತು 106ರಂತೆ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

