ಮಂಗಳೂರು, ಅ.23: ತುಳುನಾಡಿನ ನಂಬಿಕೆ, ಪ್ರಕೃತಿ ಮತ್ತು ಸಂಸ್ಕೃತಿಯನ್ನು ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ರೋಮಾಂಚಕ ಕಥಾಹಂದರದ ಮೂಲಕ ತೆರೆದಿಡುವ ‘ಬನ’ ತುಳು ಚಲನಚಿತ್ರ ಶುಕ್ರವಾರ ಕರಾವಳಿಯಾದ್ಯಂತ ತೆರೆಕಂಡಿತು. ಮಂಗಳೂರಿನ ಭಾರತ್ ಸಿನಿಮಾಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ದೀಪ ಬೆಳಗಿಸುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಐವನ್ ಡಿ.ಸೋಜ, ‘ಬನ’ ಸಿನಿಮಾ ತುಳುನಾಡಿಗೆ ಕೀರ್ತಿ ತರುವಂತಾಗಲಿ. ಚಿತ್ರದಲ್ಲಿ ಅಭಿನಯಿಸಿರುವ ಎಲ್ಲ ಕಲಾವಿದರಿಗೂ ಯಶಸ್ಸು ದೊರೆಯಲಿ. ತುಳುವರು ಕುಟುಂಬ ಸಮೇತರಾಗಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿ ಚಿತ್ರತಂಡವನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್. ಧನರಾಜ್ ಮಾತನಾಡಿ, ತುಳುನಾಡಿನ ಜನಜೀವನ ಮತ್ತು ಸಂಸ್ಕೃತಿಗೆ ಹತ್ತಿರವಾದ ಕಥಾವಸ್ತುವನ್ನು ಒಳಗೊಂಡ ಸಿನಿಮಾ ನಿರ್ಮಾಣವಾಗಿದೆ. ಪ್ರೇಕ್ಷಕರು ಚಿತ್ರವನ್ನು ವೀಕ್ಷಿಸಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿ, ತುಳುನಾಡಿನ ಕಥೆಯನ್ನು ಆಧರಿಸಿದ ‘ಬನ’ ಈಗಾಗಲೇ ಕುತೂಹಲ ಮೂಡಿಸಿದೆ. ಕರಾವಳಿಯ ಜನರು ಚಿತ್ರಮಂದಿರಕ್ಕೆ ಆಗಮಿಸಿ ಚಿತ್ರವನ್ನು ವೀಕ್ಷಿಸಬೇಕು ಎಂದರು.

ರಾಜ್ಯ ಪರಿಸರ ಪ್ರವಾಸೋದ್ಯಮ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ ಮಾತನಾಡಿ, ನಾಗಬನಕ್ಕೂ ತುಳುನಾಡಿನ ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆ. ನಾಗಾರಾಧನೆಯ ಮಹತ್ವವನ್ನು ಸಾರುವ ಈ ಚಿತ್ರ ಮನರಂಜನೆಯ ಜೊತೆಗೆ ಸಾಂಸ್ಕೃತಿಕ ಅರಿವನ್ನೂ ಮೂಡಿಸಲಿದೆ. ತುಳುವರು ಸಿನಿಮಾ ವೀಕ್ಷಿಸುವ ಮೂಲಕ ನಿರ್ಮಾಪಕರ ಪ್ರಯತ್ನಕ್ಕೆ ಬೆಂಬಲ ನೀಡಬೇಕು ಎಂದು ಹೇಳಿದರು.

ನಟ ಸಾಯಿಕೃಷ್ಣ ಕುಡ್ಲ ಮಾತನಾಡಿ, ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ಅವರು ಮೂರನೇ ಚಿತ್ರವನ್ನು ನಿರ್ದೇಶಿಸಿದ್ದು, ಅವರ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತುಳುನಾಡಿನ ಜನರು ಸಿನಿಮಾ ವೀಕ್ಷಿಸಬೇಕು ಎಂದರು. ಯಥಾರ್ಥ ಸೋಶಿಯಲ್ ಮಂಗಳೂರು ಅಧ್ಯಕ್ಷ ಈಶ್ವರ್ ಪ್ರಸಾದ್ ಶೆಟ್ಟಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ನಾಗಬನದ ಹಿನ್ನೆಲೆಯ ರೋಚಕ ಕಥೆ
ಈಶಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮನೋಹರ ರೈ ವೈಪಾಲ ನಿರ್ಮಿಸಿರುವ ‘ಬನ’ ಚಿತ್ರಕ್ಕೆ ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ನಿರ್ದೇಶನವಿದೆ. ‘ನಮ್ಮ ಮಣ್ಣ್ದ ಕಥೆ’ ಎಂಬ ಟ್ಯಾಗ್ಲೈನ್ ಹೊಂದಿರುವ ಈ ಚಿತ್ರ ತುಳುನಾಡಿನ ನಂಬಿಕೆ, ಪ್ರಕೃತಿ ಹಾಗೂ ಪರಂಪರೆಯನ್ನು ಕಥೆಯ ಕೇಂದ್ರವಾಗಿಸಿಕೊಂಡಿದೆ.
ಕಾಡಿನಲ್ಲಿ ಕಾಣಿಸಿಕೊಳ್ಳುವ ಮಗು, ಮನೆಯ ಮುಂದೆ ಪ್ರತ್ಯಕ್ಷವಾಗುವ ಹಾವು, ನಾಗಬನಕ್ಕೆ ಹಾನಿ ಮಾಡಿದವರ ಸುತ್ತ ಹೆಣೆದಿರುವ ಘಟನೆಗಳು ಕಥೆಯಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಆ್ಯಕ್ಷನ್, ಥ್ರಿಲ್ಲರ್, ಸಸ್ಪೆನ್ಸ್ ಮತ್ತು ರೊಮ್ಯಾನ್ಸ್ ಒಳಗೊಂಡ ಚಿತ್ರವು ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿದೆ.

ಈ ಹಿಂದೆ ‘ಧರ್ಮಚಾವಡಿ’, ‘ಧರ್ಮದೈವ’ ಸೇರಿದಂತೆ ಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ, ಈ ಬಾರಿ ನಾಗಬನದ ಹಿನ್ನೆಲೆಯ ವಿಭಿನ್ನ ಕಥೆಯನ್ನು ತೆರೆಗೆ ತಂದಿದ್ದಾರೆ. ಸುಮಾರು ಒಂದು ವರ್ಷದ ಸಿದ್ಧತೆಯೊಂದಿಗೆ ಚಿತ್ರ ರೂಪುಗೊಂಡಿದೆ ಎಂದು ನಿರ್ಮಾಪಕ ಮನೋಹರ ರೈ ವೈಪಾಲ ತಿಳಿಸಿದ್ದಾರೆ.

ಚಿತ್ರದಲ್ಲಿ ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ರೂಪ ವರ್ಕಾಡಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ನಿಹಾಲ್ ರೈ ನಾಯಕನಾಗಿ ಹಾಗೂ ಕೃತಿ ಶ್ರೀನಿವಾಸ್ ಪೂಜಾರಿ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಶರತ್ ಆಳ್ವ, ಪ್ರಿಯಾ ಶೆಟ್ಟಿ, ವಿಜಯಹರಿ ರೈ, ಭವ್ಯಶ್ರೀ ಪೂಜಾರಿ, ವಿಕಾಸ್ ಪುತ್ರನ್, ನಿಜರೂಪ ಶೆಟ್ಟಿ, ಸವಿತಾ ಅಂಚನ್, ಧನ್ಯ ಪೂಜಾರಿ ಹಾಗೂ ಪ್ರವೀಣ್ ಕೊಡಕ್ಕಲ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

ಅರುಣ್ ರೈ ಪುತ್ತೂರು ಛಾಯಾಗ್ರಹಣ, ನವೀನ್ ನೇರಳ್ತೊಡಿ ಸಂಕಲನ ಹಾಗೂ ಜಯಕಾರ್ತಿ ಸಂಗೀತ ಚಿತ್ರಕ್ಕಿದೆ. ಉತ್ತಮ ಕಥೆ ಮತ್ತು ಚಿತ್ರಕಥೆಯೊಂದಿಗೆ ಸಾಮಾಜಿಕ ಸಂದೇಶ, ಹಾಸ್ಯ, ಪ್ರೀತಿ, ಭಾವನೆ ಹಾಗೂ ಕೌತುಕವನ್ನು ಒಳಗೊಂಡಂತೆ ಚಿತ್ರವನ್ನು ರೂಪಿಸಲಾಗಿದೆ ಎಂದು ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.
‘ಬನ’ ಸಿನಿಮಾ ಮಂಗಳೂರು, ಸುರತ್ಕಲ್, ಪಡುಬಿದ್ರೆ, ಉಡುಪಿ, ಮಣಿಪಾಲ, ಕಾರ್ಕಳ, ದೇರಳಕಟ್ಟೆ, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ಸೇರಿದಂತೆ ಕರಾವಳಿಯ ವಿವಿಧ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

ಕಾರ್ಯಕ್ರಮದಲ್ಲಿ ನಿರ್ಮಾಪಕ ಮನೋಹರ ರೈ ವೈಪಾಲ, ಇಸ್ಮಾಯಿಲ್ ಮೂಡುಶೆಡ್ಡೆ, ವಿನೀತ್ ಕುಮಾರ್, ಸಮತಾ ಅಮೀನ್, ಪುರುಷೋತ್ತಮ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ ಉಪ್ಪಳ, ಬಾಳ ಜಗನ್ನಾಥ ಶೆಟ್ಟಿ, ಕುದ್ರೋಳಿ ಗಣೇಶ್, ನವೀನ್ ಶೆಟ್ಟಿ ಅಳಕೆ, ರಮೇಶ್ ರೈ ಕುಕ್ಕುವಳ್ಳಿ, ಸುಬ್ರಹ್ಮಣ್ಯ ಭಟ್, ರೂಪ ವರ್ಕಾಡಿ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು. ಭಾಗ್ಯರಾಜ್ ಶೆಟ್ಟಿ ಹರೇಕಳ ಕಾರ್ಯಕ್ರಮ ನಿರೂಪಿಸಿದರು.

