ನವದೆಹಲಿ: ಭಾರತದಲ್ಲಿ ಪೌರತ್ವ ತ್ಯಜಿಸಿ ವಿದೇಶಗಳ ಪೌರತ್ವ ಪಡೆಯುವವರ ಸಂಖ್ಯೆ ಕಳೆದ ಒಂದು ದಶಕದಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ರಾಜ್ಯಸಭೆಯಲ್ಲಿ ಮಂಡಿಸಲಾದ ಅಂಕಿಅಂಶಗಳ ಪ್ರಕಾರ, 2015ರಿಂದ 2024ರ ಅವಧಿಯಲ್ಲಿ ಭಾರತೀಯ ಪೌರತ್ವ ತ್ಯಜಿಸುವವರ ಸಂಖ್ಯೆ ಶೇ. 57ರಷ್ಟು ಏರಿಕೆಯಾಗಿದೆ.
2015ರಲ್ಲಿ 1,31,489 ಮಂದಿ ಭಾರತೀಯ ಪೌರತ್ವವನ್ನು ತ್ಯಜಿಸಿದ್ದರೆ, 2022ರಲ್ಲಿ ಈ ಸಂಖ್ಯೆ 2,25,620ಕ್ಕೆ ಏರಿತ್ತು. 2023ರಲ್ಲಿ 2,16,219 ಮಂದಿ ಪೌರತ್ವ ತ್ಯಜಿಸಿದ್ದು, 2024ರಲ್ಲಿ ಈ ಸಂಖ್ಯೆ 2,06,378ಕ್ಕೆ ಇಳಿಕೆಯಾಗಿದೆ. ಆದರೂ, ಒಂದು ದಶಕದ ಹಿಂದಿನ ಅಂಕಿಅಂಶಗಳಿಗೆ ಹೋಲಿಸಿದರೆ ಪೌರತ್ವ ತ್ಯಜಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದು ಗಮನಾರ್ಹವಾಗಿದೆ.

ವಿಶ್ವದ ಪ್ರಮುಖ ಆರ್ಥಿಕತೆಗಳಿಗೆ ಹೋಲಿಸಿದಾಗಲೂ ಭಾರತೀಯರು ಪೌರತ್ವ ತ್ಯಜಿಸುವ ಪ್ರಮಾಣ ಹೆಚ್ಚಿರುವುದು ಅಂಕಿಅಂಶಗಳಿಂದ ತಿಳಿದುಬಂದಿದೆ. 2015ರಿಂದ 2024ರ ನಡುವೆ ಪ್ರತಿ 10 ಲಕ್ಷ ಜನಸಂಖ್ಯೆಗೆ ಭಾರತೀಯ ಪೌರತ್ವ ತ್ಯಜಿಸುವವರ ವಾರ್ಷಿಕ ಪ್ರಮಾಣ 97ರಿಂದ 158ರ ನಡುವೆ ಇತ್ತು. ಇದೇ ಅವಧಿಯಲ್ಲಿ ಅಮೆರಿಕದಲ್ಲಿ ಈ ಪ್ರಮಾಣ 7ರಿಂದ 19ರಷ್ಟಿದ್ದರೆ, ಬ್ರಿಟನ್ನಲ್ಲಿ 6ರಿಂದ 12ರ ನಡುವೆ ದಾಖಲಾಗಿದೆ.
ಇನ್ನು, 2019ರಿಂದ 2023ರ ಜೂನ್ವರೆಗಿನ ಅವಧಿಯಲ್ಲಿ ಭಾರತೀಯರು ಹೊಸ ಪೌರತ್ವ ಪಡೆದ ಪ್ರಮುಖ ಮೂರು ದೇಶಗಳೆಂದರೆ ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾ. ಉದ್ಯೋಗ, ಶಿಕ್ಷಣ, ಉತ್ತಮ ಜೀವನಾವಕಾಶಗಳು ಸೇರಿದಂತೆ ವಿವಿಧ ಕಾರಣಗಳಿಂದ ಭಾರತೀಯರು ವಿದೇಶಗಳಲ್ಲಿ ನೆಲೆಸಲು ಆಸಕ್ತಿ ತೋರುತ್ತಿರುವುದನ್ನು ಈ ಅಂಕಿಅಂಶಗಳು ಪ್ರತಿಬಿಂಬಿಸುತ್ತವೆ.

