ಮಂಗಳೂರು: ತುಳುನಾಡಿನ ಗ್ರಾಮೀಣ ರಂಗಭೂಮಿಯ ಆಗುಹೋಗುಗಳನ್ನು ಆಧರಿಸಿದ ನೂತನ ತುಳು ಚಲನಚಿತ್ರವೊಂದರ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಅಕ್ಟೋಬರ್ 26ರಂದು ಸಂಜೆ 5.30ಕ್ಕೆ ನಗರದ ಬಲ್ಮಠದ ಡಾನ್ ಬಾಸ್ಕೋ ಹಾಲ್ನಲ್ಲಿ ನಡೆಯಲಿದೆ.
ಸಮಾಜಸೇವೆ ಹಾಗೂ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಜಾನ್ ವಿಲ್ಸನ್ ಲೋಬೊ ಅವರ ಲೋಬೊ ಪ್ರೊಡಕ್ಷನ್ಸ್ ಮತ್ತು ಸೋನುಲವಿ ಸಿನೆ ಕ್ರಿಯೇಷನ್ಸ್ ಸಹಯೋಗದಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಲಿದ್ದಾರೆ ಎಂದು ಚಿತ್ರದ ನಿರ್ಮಾಣ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ನರೇಂದ್ರ ಕೆರೆಕಾಡು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾನ್ ವಿಲ್ಸನ್ ಲೋಬೊ ಅವರು ಈಗಾಗಲೇ ‘ವೇಳ್ ಘಡಿ’ ಎಂಬ ಕೊಂಕಣಿ ಚಿತ್ರವನ್ನು ನಿರ್ಮಿಸುತ್ತಿದ್ದು, ಇದೀಗ ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಪ್ರಥಮ ಬಾರಿಗೆ ತುಳು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಮೂಲಕ ತುಳುನಾಡಿನ ಕಲಾವಿದರು ಮತ್ತು ತಂತ್ರಜ್ಞರಿಗೆ ಅವಕಾಶ ಕಲ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಗ್ರಾಮೀಣ ತುಳು ರಂಗಭೂಮಿಯ ಬದುಕು, ಅಲ್ಲಿನ ಅನುಭವಗಳು ಮತ್ತು ಘಟನೆಗಳನ್ನು ಕಥೆಯಾಗಿ ರೂಪಿಸಲಾಗಿದೆ. ನವಿರಾದ ಹಾಸ್ಯದೊಂದಿಗೆ ಉತ್ತಮ ಸಂದೇಶವನ್ನು ನೀಡುವ ಈ ಚಿತ್ರವನ್ನು ಕುಟುಂಬ ಸಮೇತ ವೀಕ್ಷಿಸಬಹುದಾದ ರೀತಿಯಲ್ಲಿ ರೂಪಿಸಲಾಗುತ್ತಿದೆ. ಕಥೆಗೆ ಅಗತ್ಯವಿರುವಂತೆ ಸೀಮಿತ ಬಜೆಟ್ನಲ್ಲಿ ನಿರ್ಮಾಣಗೊಳ್ಳಲಿರುವ ಚಿತ್ರವು 2027ರಲ್ಲಿ ತೆರೆಕಾಣುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಚಿತ್ರದ ಸಹ ನಿರ್ದೇಶಕ ರೋಶನ್ ನೆಲ್ಲಿಗುಡ್ಡೆ ಮಾತನಾಡಿ, ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ರೆ. ಫಾ.ಆಂಡ್ರೋ ಲಿಯೋ ಡಿ’ಸೋಜ, ಪೆರ್ಮನ್ನೂರು ಸೈಂಟ್ ಸೆಬಾಸ್ಟಿಯನ್ ಚರ್ಚ್ನ ಪ್ರಧಾನ ಧರ್ಮಗುರುಗಳು ಆಶೀರ್ವಚನ ನೀಡಲಿದ್ದಾರೆ. ಜಾನ್ ವಿಲ್ಸನ್ ಲೋಬೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಶೂಟಿಂಗ್ ಕ್ಲಾಪ್ ಹಸ್ತಾಂತರಿಸಲಿದ್ದು, ದೈಯ್ಜಿ ವರ್ಲ್ಡ್ ಮೀಡಿಯಾದ ವಾಲ್ಟರ್ ನಂದಳಿಕೆ ಕ್ಯಾಮರಾ ಚಾಲನೆ ನೀಡಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಅವರು ಚಿತ್ರತಂಡದ ತಂತ್ರಜ್ಞರನ್ನು ಗೌರವಿಸಲಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪರಿಸರ ಮತ್ತು ಪ್ರವಾಸೋದ್ಯಮ ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೋ, ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ.ಶೆಟ್ಟಿ, ಕಲಾಸಂಗಮದ ವಿಜಯಕುಮಾರ್ ಕೊಡಿಯಾಲ್ಬೈಲ್, ತುಳು ಚಿತ್ರರಂಗದ ಕಲಾವಿದ ದೇವದಾಸ್ ಕಾಪಿಕಾಡ್, ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ವಸಂತ ಬೆರ್ನಾಡ್, ಡೀನೆಟ್ ಇಂಟರ್ನೆಟ್ ಸರ್ವಿಸ್ನ ಫ್ರಾನ್ಸಿಸ್ ಲೋಬೊ, ಯುಗಪುರುಷ ಕಿನ್ನಿಗೋಳಿಯ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ, ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಹಾಗೂ ಎಕ್ಸ್ಪ್ರೆಶನ್ ಆರ್ಟ್ಸ್ನ ಈಶ್ವರ್ ಕೋಡಿಕಲ್ ಮತ್ತಿತರರು ಭಾಗವಹಿಸಲಿದ್ದಾರೆ.
ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ದೇವಿಪ್ರಕಾಶ್ ಎಸ್. ವಹಿಸಿಕೊಂಡಿದ್ದಾರೆ. ಕನ್ನಡ, ತುಳು ಮತ್ತು ತೆಲುಗು ಚಿತ್ರರಂಗದಲ್ಲಿ ಕಲಾ ನಿರ್ದೇಶಕ ಹಾಗೂ ನಟನಾಗಿ ಗುರುತಿಸಿಕೊಂಡಿರುವ ಅವರು, ಈ ಚಿತ್ರದ ಮೂಲಕ ಹೊಸ ಕಥೆಯನ್ನು ಪ್ರೇಕ್ಷಕರ ಮುಂದಿಡಲು ಸಿದ್ಧರಾಗಿದ್ದಾರೆ. ಗೀತರಚನೆಯನ್ನು ವಿಜಯಕುಮಾರ್ ಕೊಡಿಯಾಲ್ಬೈಲ್ ಮಾಡಲಿದ್ದು, ಸಹ ನಿರ್ದೇಶಕರಾಗಿ ರೋಶನ್ ನೆಲ್ಲಿಗುಡ್ಡೆ, ಸಂಗೀತ ನಿರ್ದೇಶಕರಾಗಿ ಗಗನ್ ಸುವರ್ಣ ಮೂಲ್ಕಿ ಹಾಗೂ ಛಾಯಾಗ್ರಾಹಕರಾಗಿ ಗಜೇಂದ್ರ ಕೋಲಾರ ಕಾರ್ಯನಿರ್ವಹಿಸಲಿದ್ದಾರೆ. ಪತ್ರಕರ್ತ ಮತ್ತು ರಂಗಭೂಮಿ ಕಲಾವಿದ ನರೇಂದ್ರ ಕೆರೆಕಾಡು ನಿರ್ಮಾಣ ನಿರ್ವಹಣೆ ನೋಡಿಕೊಳ್ಳಲಿದ್ದಾರೆ.
ಚಿತ್ರದಲ್ಲಿ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ಉಮೇಶ್ ಮಿಜಾರ್, ನರೇಂದ್ರ ಕೆರೆಕಾಡು, ರೋಶನ್ ನೆಲ್ಲಿಗುಡ್ಡೆ, ಯುವರಾಜ್, ಸುರೇಶ್ ಶೆಟ್ಟಿಗಾರ್ ಕೆರೆಕಾಡು, ಜೆರೋಂ ಮೋರಸ್, ಸುನಿಲ್ ಡಿಸೋಜ ನೆಲ್ಲಿಗುಡ್ಡೆ, ಲಿಯೋ ರಾಣಿಪುರ, ಶರತ್ ಶೆಟ್ಟಿ ಕಿನ್ನಿಗೋಳಿ, ರಾಧಿಕಾ ಪೂಜಾರಿ, ಲೂಸಿ ಅರಾನ್ಹ, ಹರೀಶ್ ಕೋಟ್ಯಾನ್ ಪಡುಪಣಂಬೂರು, ಲಿಸ್ಟನ್ ಫಲಿಮಾರು, ಕಾವ್ಯ ಕೊಡೆತ್ತೂರು, ಹರಿಪ್ರಸಾದ್ ನಂದಳಿಕೆ, ಭಗವಾನ್ ಸುರತ್ಕಲ್, ಚಿತ್ರಲೇಖ, ಸಂತೋಷ್ ಕಾರ್ಕಳ, ಸ್ಯಾಂಡ್ರಾ ಮಂಗಳೂರು, ಪೂರ್ಣಿಮಾ ಸುರತ್ಕಲ್, ಜಯಕುಮಾರ್ ಕುಬೆವೂರು, ಸಾಕ್ಷಿ ಗುರುಪುರ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ಅಭಿನಯಿಸಲಿದ್ದಾರೆ.
ಮಂಗಳೂರು, ಮೂಲ್ಕಿ, ಕಿನ್ನಿಗೋಳಿ ಸೇರಿದಂತೆ ಕರಾವಳಿಯ ಗ್ರಾಮೀಣ ಪ್ರದೇಶಗಳಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲು ಯೋಜಿಸಲಾಗಿದೆ ಎಂದು ನಿರ್ದೇಶಕ ದೇವಿಪ್ರಕಾಶ್ ಎಸ್. ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಲಾವಿದ ಸುನಿಲ್ ಡಿಸೋಜ ನೆಲ್ಲಿಗುಡ್ಡೆ, ಕಲಾಭಿ ಸಂಸ್ಥೆಯ ಅಧ್ಯಕ್ಷ ಸುರೇಶ್ ಬಿ. ವರ್ಕಾಡಿ ಹಾಗೂ ಪ್ರಚಾರ ಸಂಯೋಜಕ ಆರೀಫ್ ಉಪಸ್ಥಿತರಿದ್ದರು.

