ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ಶಾರದಾ ಪದವಿ ಕಾಲೇಜಿನ ಪ್ರಾಂಶುಪಾಲೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಖಾಸಗಿ ಕಾಲೇಜು ಪ್ರಾಂಶುಪಾಲರ ಸಂಘದ ಉಪಾಧ್ಯಕ್ಷೆ ಡಾ.ಮೀನಾ ಜೆ.ಪಣಿಕ್ಕರ್ ಅವರು ಬೆಂಗಳೂರಿನ ಇನ್ಸ್ಟಿಟ್ಯೂಟ್ ಫಾರ್ ಸೋಷಿಯಲ್ ಆ್ಯಂಡ್ ಎಕನಾಮಿಕ್ ಚೇಂಜ್ (ISEC) ಸಂಸ್ಥೆಯಲ್ಲಿ ತಮ್ಮ ಪೋಸ್ಟ್ ಡಾಕ್ಟರಲ್ ಸಂಶೋಧನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಡಾ.ಸೋಬಿನ್ ಜಾರ್ಜ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಸಂಶೋಧನೆಯು ಧಾರ್ಮಿಕ ಆಚರಣೆಗಳಲ್ಲಿ ತೊಡಗಿಸಿಕೊಂಡಿರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮುದಾಯಗಳ ಅಧ್ಯಯನವನ್ನು ಒಳಗೊಂಡಿದೆ. ಕರ್ನಾಟಕದ ಎರಡು ಜಿಲ್ಲೆಗಳು ಹಾಗೂ ಕೇರಳದ ಐದು ಜಿಲ್ಲೆಗಳಲ್ಲಿ ಕ್ಷೇತ್ರ ಅಧ್ಯಯನ ನಡೆಸುವ ಮೂಲಕ ಸಂಶೋಧನೆಯನ್ನು ಪೂರ್ಣಗೊಳಿಸಲಾಗಿದೆ.

ಈ ಸಂಶೋಧನೆಯ ಫಲಿತಾಂಶಗಳನ್ನು 2027ರ ವೇಳೆಗೆ ಪುಸ್ತಕದ ರೂಪದಲ್ಲಿ ಪ್ರಕಟಿಸುವ ನಿರೀಕ್ಷೆಯಿದ್ದು, ಅಂತರರಾಷ್ಟ್ರೀಯ ಪ್ರಕಾಶಕರ ಮೂಲಕ ಕೃತಿ ಹೊರಬರಲಿದೆ ಎಂದು ತಿಳಿಸಲಾಗಿದೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಡಾ.ಮೀನಾ ಜೆ. ಪಣಿಕ್ಕರ್ ಅವರು ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಪದವಿ (ಎಂ.ಎ.) ಪಡೆಯುವ ಸಂದರ್ಭದಲ್ಲಿ ರ್ಯಾಂಕ್ ಗಳಿಸಿದ್ದರು. ಅವರ ಪಿಎಚ್ಡಿ ಸಂಶೋಧನೆಯು ಸಾಂಸ್ಕೃತಿಕ ಅನುವಾದದ ವಿಷಯವನ್ನು ಆಧರಿಸಿತ್ತು.
ಬೋಧನೆ, ಸಂಶೋಧನೆ ಹಾಗೂ ಶೈಕ್ಷಣಿಕ ಆಡಳಿತದಲ್ಲಿ ತೊಡಗಿಸಿಕೊಂಡಿರುವ ಅವರು, ಇದೀಗ ಪೋಸ್ಟ್ ಡಾಕ್ಟರಲ್ ಸಂಶೋಧನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ತಮ್ಮ ಶೈಕ್ಷಣಿಕ ಸಾಧನೆಗೆ ಮತ್ತೊಂದು ಮೈಲಿಗಲ್ಲು ಸೇರಿಸಿದ್ದಾರೆ.

