ಬೆಂಗಳೂರು: ಖ್ಯಾತ ನಟ ಅರ್ಜುನ್ ಸರ್ಜಾ ಅವರ ಕುಟುಂಬದಲ್ಲಿ ಮದುವೆಯ ಸಂಭ್ರಮ ಮನೆಮಾಡಿದೆ. ಅವರ ಕಿರಿಯ ಪುತ್ರಿ ಅಂಜನಾ ಅರ್ಜುನ್ ಅವರು ತಮ್ಮ ಬಹುಕಾಲದ ಪ್ರಿಯಕರ, ವಿದೇಶಿ ಉದ್ಯಮಿ ಇಸಾಯ್ ನಟ್ಟರ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 14 ವರ್ಷಗಳ ಪ್ರೇಮ ಸಂಬಂಧ ಇದೀಗ ಮದುವೆಯ ಮೂಲಕ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.

ವಿದೇಶದಲ್ಲಿ ನಡೆದ ವಿವಾಹ ಸಮಾರಂಭವು ಭಾರತೀಯ ಸಂಪ್ರದಾಯದಂತೆ ನೆರವೇರಿದೆ. ಕುಟುಂಬದ ಸದಸ್ಯರು, ಆಪ್ತರು ಹಾಗೂ ಸ್ನೇಹಿತರು ಭಾರತೀಯ ಶೈಲಿಯ ಉಡುಪುಗಳಲ್ಲಿ ಸಮಾರಂಭದಲ್ಲಿ ಪಾಲ್ಗೊಂಡು ನವದಂಪತಿಗೆ ಶುಭ ಹಾರೈಸಿದ್ದಾರೆ.

ಅಂಜನಾ ಮತ್ತು ಇಸಾಯ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕಳೆದ ವರ್ಷ ಇಟಲಿಯಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಇವರ ನಿಶ್ಚಿತಾರ್ಥ ನಡೆದಿತ್ತು. ಅದಕ್ಕೂ ಮುನ್ನ ಇಸಾಯ್ ವಿದೇಶದಲ್ಲಿ ಅಂಜನಾ ಅವರಿಗೆ ಪ್ರೇಮ ನಿವೇದನೆ ಮಾಡಿದ್ದ ಕ್ಷಣವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಎನ್ನಲಾಗಿದೆ.

ದೀರ್ಘಕಾಲದ ಪ್ರೀತಿ ಹಾಗೂ ಬಾಂಧವ್ಯ ಇದೀಗ ಮದುವೆಯ ರೂಪ ಪಡೆದಿದ್ದು, ನವಜೋಡಿಯ ಹೊಸ ಜೀವನಕ್ಕೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಶುಭಾಶಯಗಳನ್ನು ಸಲ್ಲಿಸುತ್ತಿದ್ದಾರೆ.

ಚಿತ್ರರಂಗದ ಹಿನ್ನೆಲೆಯ ಕುಟುಂಬಕ್ಕೆ ಸೇರಿದವರಾದರೂ ಅಂಜನಾ ಸಿನಿಮಾರಂಗದಿಂದ ದೂರ ಉಳಿದು ಫ್ಯಾಷನ್ ಉದ್ಯಮದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದಾರೆ. ಪರಿಸರ ಸ್ನೇಹಿ ಹಾಗೂ ವೆಗನ್ ಫ್ಯಾಷನ್ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಅವರು, ಹಣ್ಣಿನ ಸಿಪ್ಪೆ ಸೇರಿದಂತೆ ತ್ಯಾಜ್ಯ ವಸ್ತುಗಳನ್ನು ಬಳಸಿಕೊಂಡು ಐಷಾರಾಮಿ ಕೈಚೀಲಗಳನ್ನು ತಯಾರಿಸುವ ಬ್ರ್ಯಾಂಡ್ ಮೂಲಕ ಉದ್ಯಮ ಕ್ಷೇತ್ರದಲ್ಲಿ ಗಮನ ಸೆಳೆದಿದ್ದಾರೆ.

ಅಂಜನಾ ಮತ್ತು ಇಸಾಯ್ ಅವರ ವಿವಾಹದ ಸುದ್ದಿ ಹೊರಬಿದ್ದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.



