ಬೆಂಗಳೂರು: ಕಳೆದ 12 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ₹15 ಸಾವಿರ ಗೌರವಧನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು, ಮಾಸಿಕ ಗೌರವಧನವನ್ನು ₹2 ಸಾವಿರ ಹೆಚ್ಚಿಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ.
ಆರಂಭದಲ್ಲಿ ಸರ್ಕಾರದ ಪ್ರಸ್ತಾವನೆಗೆ ಒಪ್ಪದಿದ್ದ ಆಶಾ ಕಾರ್ಯಕರ್ತೆಯರು, ಮುಖ್ಯಮಂತ್ರಿಗಳ ಮನವೊಲಿಕೆಯ ಬಳಿಕ ಬೇಡಿಕೆಯನ್ನು ಒಪ್ಪಿಕೊಂಡಿದ್ದಾರೆ. ಸದ್ಯ ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಒಟ್ಟು ₹8 ಸಾವಿರ ಗೌರವಧನ ದೊರೆಯುತ್ತಿದ್ದು. ಪರಿಷ್ಕೃತ ಗೌರವಧನ 2027ರ ಜನವರಿ 1ರಿಂದ ಜಾರಿಗೆ ಬರಲಿದೆ. ಪ್ರಸ್ತುತ ₹8 ಸಾವಿರ ಪಡೆಯುತ್ತಿರುವ ಕಾರ್ಯಕರ್ತೆಯರಿಗೆ ಇನ್ನು ಮುಂದೆ ₹10 ಸಾವಿರ ದೊರೆಯಲಿದೆ.
ಬೆಳಗ್ಗೆ ಆರೋಗ್ಯ ಸಚಿವ ಯುಟಿ ಖಾದರ್ ಸಹ ಆಶಾ ಕಾರ್ಯಕರ್ತೆಯರ ಜೊತೆ ಸಭೆ ಮಾಡಿದ್ದು, 2000 ರೂಪಾಯಿ ಹೆಚ್ಚಳ ಮಾಡುತ್ತೇವೆ ಪ್ರತಿಭಟನೆ ಕೈಬಿಡಿ ಎಂದು ಮನವಿ ಮಾಡಿದ್ದರು. ಆದ್ರೆ, ಆಶಾ ಕಾರ್ಯಕರ್ತೆಯರು ಒಪ್ಪಿರಲಿಲ್ಲ. ಈಗ ಅಂತಿಮವಾಗಿ ಸಿಎಂ ಡಿಕೆ ಶಿವಕುಮಾರ್ ಮಾತಿಗೆ ಆಶಾ ಕಾರ್ಯಕರ್ತೆಯರು 2000 ರೂಪಾಯಿಗೆ ಒಪ್ಪಿಕೊಂಡಿದ್ದಾರೆ.
ಉಳಿದ ಹೆಚ್ಚುವರಿ ₹2 ಸಾವಿರದ ಬಗ್ಗೆ ಮುಂದಿನ ಬಜೆಟ್ನಲ್ಲಿ ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.

