ಮಂಗಳೂರು : ಪಾತಾಳ ಯಕ್ಷ ಪ್ರತಿಷ್ಠಾನ, ಪಾತಾಳ ಉಪ್ಪಿನಂಗಡಿ ಇವರು ಅಯೋಜಿಸುವ ಹಿರಿಯ ಸ್ತ್ರೀವೇಷಾಧಾರಿ ಕೀರ್ತಿಶೇಷ ಪಾತಾಳ ವೆಂಕಟ್ರಮಣ ಭಟ್ಟರ ಹೆಸರಿನಲ್ಲಿ ಕೊಡಮಾಡುವ ಪಾತಾಳ ಸ್ಮ್ರತಿ ಗೌರವಕ್ಕೆ ಸಂಘಟಕ, ದಾನಿ, ಸಾಹಿತ್ಯ ಪರಿಚಾರಕ, ಕಲಾ ಪೋಷಕ, ಸಜ್ಜನ-ಸಹೃದಯಿ ಡಾ.ಹರಿಕೃಷ್ಣ ಪುನರೂರು ಭಾಜನರಾಗಿದ್ದಾರೆ. ಪ್ರಶಸ್ತಿಯನ್ನು ಜನವರಿ 5 ರಂದು ಸೋಮವಾರ ಸಂಜೆ ಗಂಟೆ 4ಕ್ಕೆ ಉಪ್ಪಿನಂಗಡಿ ಸಮೀಪದ ಪಾತಾಳ ಮನೆಯಲ್ಲಿ ಸ್ಮೃತಿ-ಗೌರವ ಪ್ರದಾನ ಸಮಾರಂಭ ನಡೆಯಲಿದೆ ಎಂದು ಡಾ.ಮಹಾಲಿಂಗ ಭಟ್ ಅವರು ಪತ್ರಿಕಾಭವನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಯಕ್ಷಗಾನದ ಹಿರಿಯ ಸ್ತ್ರೀವೇಷಧಾರಿ ಕೀರ್ತಿಶೇಷ ಪಾತಾಳ ವೆಂಕಟ್ರಮಣ ಭಟ್ಟರ ಸ್ಮೃತಿಯಲ್ಲಿ ನಡೆಯುವ ಈ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಶ್ರೀ ಡಿ.ಹರ್ಷೇಂದ್ರ ಕುಮಾರ್ ವಹಿಸಲಿದ್ದಾರೆ. ಪಾತಾಳರ ಕುರಿತಾದ ನೆನಪು ಹಾಗೂ ಡಾ.ಹರಿಕೃಷ್ಣ ಪುನರೂರು ಅವರ ಕುರಿತು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪೂರ್ವಾಧ್ಯಕ್ಷ ಪ್ರೊ.ಎಂ.ಎಲ್.ಸಾಮಗ ಗೌರವ ನುಡಿಹಾರವನ್ನು ಸಲ್ಲಿಸಲಿದ್ದಾರೆ.ಪುತ್ತೂರು ಪುತ್ತಿಲ ಪರಿವಾರ ಸೇವಾ ಟ್ರಸ್ಟಿನ ಮುಖ್ಯಸ್ಥ ಶ್ರೀ ಅರುಣ ಕುಮಾರ್ ಪುತ್ತಿಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪುತ್ತೂರಿನ ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಟಿ. ಶೆಟ್ಟಿ ಶುಭಾಶಂಸನೆ ಮಾಡಲಿದ್ದಾರೆ ಎಂದು ಡಾ.ಭಟ್ ಅವರು ಹೇಳಿದರು.

ಈ ಸಂದರ್ಭದಲ್ಲಿ ಖ್ಯಾತ ಗಮಕಿ ಶ್ರೀ ಗಣಪತಿ ಪದ್ಯಾಣ ಹಾಗೂ ಖ್ಯಾತ ಸಾಹಿತಿ, ಪ್ರವಚನಗಾರ ಶ್ರೀ ಮುಳಿಯ ಶಂಕರ ಭಟ್ಟರನ್ನು ‘ಪಾತಾಳ ಸ್ಮೃತಿ ಪುರಸ್ಕಾರ’ ಪ್ರದಾನ ಮಾಡುವ ಮೂಲಕ ಗೌರವಿಸಲಾಗುವುದು.ಅಲ್ಲದೆ ಅಪರಾಹ್ನ 2 ಗಂಟೆಗೆ ‘ಶ್ರೀ ಕೃಷ್ಣ ಪರಂಧಾಮ’ ಎನ್ನುವ ಆಖ್ಯಾನದ ‘ಕಾವ್ಯವಾಚನ’ ನಡೆಯಲಿದೆ ಎಂದರು.
ಕೀರ್ತಿಶೇಷ ಪಾತಾಳ ವೆಂಕಟ್ರಮಣ ಭಟ್ಟರು ಸಕ್ರಿಯವಾಗಿರುವಾಗಲೇ ‘ಪಾತಾಳ ಯಕ್ಷ ಪ್ರತಿಷ್ಠಾನ’ವನ್ನು ರೂಪೀಕರಿಸಿ ಹಲವಾರು ಹಿರಿಯ ಕಲಾವಿದರಿಗೆ ‘ಪಾತಾಳ ಪ್ರಶಸ್ತಿ’ ನೀಡಿ ಸತ್ಕರಿಸಿರುವುದು ಉಲ್ಲೇಖನೀಯ. ಅವರು 19-7-2025ರಂದು ನಿಧನರಾಗಿದ್ದು, ಅವರ ಹೆಸರಿನಲ್ಲಿ ನಡೆಯುವ ಮೊದಲ ‘ಸ್ಮೃತಿ ಗೌರವ’ ಸಮಾರಂಭ ಇದಾಗಿದೆ. ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ ಪ್ರವೇಶವಿದೆ

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಕಸಾಪ ಅಧ್ಯಕ್ಷರಾದ ಡಾ.ಹರಿಕ್ರಷ್ಣ ಪುನರೂರು,ಅಂಬಾಪ್ರಸಾದ್ ಪಾತಾಳ, ಹಾಗೂ ಶ್ರೀ ರಾಮ್ ಪಾತಾಳ, ಅಧ್ಯಕ್ಷರು ಪುತ್ತಿಲ ಪರಿವಾರ,ಮೊದಲಾದವರು ಉಪಸ್ಥಿತರಿದ್ದರು.

