ಮಂಗಳೂರು : ಮಲ್ಲಿಕಾ ಕಲಾವೃಂದವು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಜಾತ್ರೆಯ ಅಂಗವಾಗಿ ದೇವಳದ ನೂತನ ವೇದಿಕೆಯಲ್ಲಿ 76ನೇ ವರ್ಷದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಜನವರಿ 13 ರಿಂದ 22ರ ತನಕ 10 ದಿನಗಳ ಕಾಲ ನಡೆಯಲಿದೆ ಎಂದು ಸಮಿತಿಯ ಕಾರ್ಯಧ್ಯಕ್ಷರಾದ ಸುಧಾಕರ್ ರಾವ್ ಪೇಜಾವರ ತಿಳಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ 10 ದಿನಗಳ ಕಾರ್ಯಕ್ರಮದಲ್ಲಿ ಸುಮಾರು 180ಕ್ಕೂ ಅಧಿಕ ಕಲಾ ತಂಡಗಳು,3೦೦೦ ಅಧಿಕ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಈ ವರ್ಷ ಬಾಲ ಪ್ರತಿಭೋತ್ಸವ, ಯುವ ಪ್ರತಿಭೋತ್ಸವ, ಮಹಿಳಾ ಪ್ರತಿಭೋತ್ಸವ, ಕನ್ನಡ-ತುಳು ನಾಟಕೋತ್ಸವ, ಪೌರಾಣಿಕ ಅಥವಾ ಚಾರಿತ್ರಿಕ ನಾಟಕಗಳು, ತೊಗಲು ಗೊಂಬೆ ಆಟ, ನೆರಳಿನಾಟ, ಯಕ್ಷಗಾನ ಗೊಂಬೆ ಆಟ, ಯಕ್ಷಗಾನ, ಮಹಿಳಾ, ಕಿಶೋರ ಯಕ್ಷಗಾನಗಳು, ನೃತ್ಯೋತ್ಸವ, ಹರಿಕಥೆ, ಪ್ರವಚನ, ಇಂದ್ರಜಾಲ ಪ್ರದರ್ಶನ, ದಾಸರ ಗೀತೆ, ಭಗವದ್ಗೀತೆ, ಕಂಠಪಾಠ ಸ್ಪರ್ಧೆ, ಯೋಗಾಸನ ಪ್ರದರ್ಶನ ಮುಂತಾದ ಕಾಯಕ್ರಮವನ್ನು ಆಯೋಜಸಲಾಗಿದ್ದು ಕಲಾ ಜಗತ್ತಿನ ಸಾಕ್ಷಾತ್ಕಾರವೇ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಆವರಣದಲ್ಲಿ ಉಂಟಾಗಲಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮವು ಪ್ರತಿದಿನ ಬೆಳಿಗ್ಗೆ 8 ರಿಂದ ರಾತ್ರಿ 11:30 ರವರೆಗೆ ನಡೆಯಲಿದೆ, ಈ ಸಂಧರ್ಭದಲ್ಲಿ ವಿವಿಧ ಕಲಾರಂಗದಲ್ಲಿ ಅನುಪಮ ಸೇವೆ ಸಲ್ಲಿಸಿದ ಹಿರಿಯ ಗಣ್ಯರನ್ನು ಶಾಲು ಹೊದಿಸಿ ಸನ್ಮಾನಿಸುವ ಯೋಜನೆಯನ್ನು ಹಮ್ಮಿ ಕೊಳ್ಳಲಾಗಿದೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರಿಗೂ ದೇವರ ಪ್ರಸಾದ ಮತ್ತು ಪ್ರಮಾಣಪತ್ರವನ್ನು ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸದಸ್ಯರಾದ ಎಂ.ರವೀಂದ್ರ ಶೇಟ್ , ಕೆ.ದಾಮೋದರ ರೈ, ವಿ.ಕರುಣಾಕರನ್, ಸನತ್ ಕುಮಾರ್ ಜೈನ್ ಉಪಸ್ಥಿತರಿದ್ದರು .

