ಧಾರವಾಡ : ಭಾರತೀಯರಾಗಿ ಭಾರತವನ್ನು ಪ್ರೀತಿಸುವ ಜೊತೆಗೆ ರಾಷ್ಟ್ರಕ್ಕಾಗಿ ಸಮರ್ಪಣೆ ಮಾಡುವ ಮನೋಭಾವದೊಂದಿಗೆೆ ಎಲ್ಲರಲ್ಲೂ ದೇಶ ಸೇವೆಯ ಚಿಂತನೆ ಅಗತ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ಪ್ರಜ್ಞಾ ಪ್ರವಾಹದ ಸಹ ಸಂಯೋಜಕ ರಘುನಂದನಜಿ ಹೇಳಿದರು.

ಅವರು ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀಸಂಸ್ಥಾನ ಪಂಚಗೃಹ ಹಿರೇಮಠದ ಆವರಣದಲ್ಲಿ ರಾಷ್ಟಿçಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ಅಮ್ಮಿನಬಾವಿ ಹಾಗೂ ಕನಕೂರ ಮಂಡಳಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ದೇಶ ಸೇವೆ ನಮ್ಮ ಗ್ರಾಮದಿಂದಲೇ ಆರಂಭಗೊಳ್ಳಬೇಕು. ಗುಟಕಾ, ಸಾರಾಯಿ, ಪ್ಲಾಸ್ಟಿಕ್, ರಾಸಾಯನಿಕ ಹಾಗೂ ಕೊಳಚೆ ಮುಕ್ತ ಗ್ರಾಮ ನಿರ್ಮಾಣವೂ ಸಹ ದೇಶಸೇವೆಯೇ ಆಗಿದ್ದು, ಇದನ್ನು ಕೂಡಲೇ ಯುವ ಸಮೂಹ ಆರಂಭಿಸಬೇಕೆಂದು ಕರೆ ನೀಡಿದರು.
ದೇಶವೇ ದೊಡ್ಡದು, ದೇಶವೇ ಮೊದಲು ಎಂಬ ಮನೋಭೂಮಿಕೆಯಲ್ಲಿ ದೇಶದ ಘನತೆಯನ್ನು ಎತ್ತಿ ಹಿಡಿದು ಬದಲಾವಣೆಗೆ ತೆರೆದುಕೊಳ್ಳಬೇಕು. ಹಿರಿಯರಾದವರು ತಮ್ಮ ಕುಟುಂಬದ ಎಲ್ಲಾ ಸದಸ್ಯರಿಗೆ ನಮ್ಮ ರಾಷ್ಟ್ರದ ಸನಾತನ ಹಿಂದೂ ಸಂಸ್ಕೃತಿ- ಸ0ಸ್ಕಾರಗಳನ್ನು ನೀಡಿ ಹಿಂದುತ್ವದ ಜಾಗೃತಿ ಮಾಡಲು ಕೈಜೋಡಿಸಬೇಕು ಎಂದೂ ರಘುನಂದನ ನುಡಿದರು.

ಅಧ್ಯಕ್ಷತೆವಹಿಸಿದ್ದ ಕನ್ನಡ ಪತ್ರಿಕಾರಂಗದ ಹಿರಿಯ ನಿಯತಕಾಲಿಕ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ವಿಶ್ರಾಂತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ಮಾತನಾಡಿ, ಸತ್ಯದ ಅನುಸಂಧಾನದೊಂದಿಗೆ, ಅಹಿಂಸೆಯ ಅನುಪಾಲನೆ ಮಾಡಿ, ವಿಶ್ವ ಕುಟುಂಬದ ಭಾವ ಸಿಂಚನದಲ್ಲಿ ಉತ್ಕೃಷ್ಟ ಜೀವನ ವಿಧಾನ ಹೊಂದಿ ಆತ್ಮಜ್ಞಾನ ಸಂಪಾದನೆಗೆ ತೆರೆದುಕೊಂಡಾಗ ದೇವಭೂಮಿ ಭಾರತದ ಮಣ್ಣಿನ ಕಣಗಳ ಘನತೆ ನಮಗೆ ಅರ್ಥವಾಗುತ್ತದೆ. ಮನುಕುಲವೂ ಸೇರಿದಂತೆ ಎಲ್ಲ ಜೀವಸಂಕುಲದಲ್ಲಿ ಇರುವ ದೈವತ್ವದ ಚೈತನ್ಯವನ್ನು ಗುರುತಿಸಲು ಸಾಧ್ಯವಾದಾಗ, ಸಂಘರ್ಷವಳಿದು ಎಲ್ಲೆಡೆ ಸಮನ್ವಯ ಅಂಕುರಿಸಲು ಸಾಧ್ಯವಾಗುತ್ತದೆ ಎಂದರು.

ಶಿವಾನಂದ ತಡಕೋಡ ಹಾಗೂ ನವೀನ ಪದಕಿ ದೇಶಭಕ್ತಿ ಗೀತೆಗಳನ್ನು ಹಾಡಿದರು. ವಸಂತ ಪದಕಿ, ಯಲ್ಲಪ್ಪ ಜಾಮನೂನವರ, ಮಹಾಂತೇಶ ಹುಲ್ಲೂರ, ಮೌನೇಶ ಪತ್ತಾರ, ಕಿರಣ ಜಾಧವ, ಚಂದ್ರು ಶೆಟ್ಟರ, ರಾಮಚಂದ್ರ ದೇಶಪಾಂಡೆ, ಲಿಂಗರಾಜ ಮುಂದಿನಮನಿ, ಬಸವರಾಜ ಸವದತ್ತಿ, ಶಾಂತಿನಾಥ ಲೋಕೂರ, ಶ್ರೀನಿವಾಸ ಭೋವಿ ಇದ್ದರು.
ಶೋಭಾಯಾತ್ರೆ : ಇದಕ್ಕೂ ಮೊದಲು ನಡೆದ ದೇಶಭಕ್ತರ ಭಾವಚಿತ್ರಗಳನ್ನು ಹೊತ್ತ ಸುಮಾರು 50ಕ್ಕೂ ಹೆಚ್ಚು ಚಕ್ಕಡಿಗಳ ಮೆರವಣಿಗೆಯ ಶೋಭಾಯಾತ್ರೆಯನ್ನು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ತಾ.ಪಂ. ಮಾಜಿ ಸದಸ್ಯ ಸುರೇಂದ್ರ ದೇಸಾಯಿ, ವ್ಹಿ.ಬಿ. ಕೆಂಚನಗೌಡರ, ಬಿ.ಸಿ.ಕೊಳ್ಳಿ, ಶಿವಾಜಿ ಕಲಾಲ, ಅಮ್ಮಿನಬಾವಿ, ಮರೇವಾಡ, ಚಂದನಮಟ್ಟಿ, ಕೌಲಗೇರಿ ಗ್ರಾಮಗಳ ಶ್ರೀವಿಠೋಬ ದೇವರ ವಾರಕರಿ ಸಂತರ ಬಳಗದ ಸದಸ್ಯರು ಸೇರಿ ಹಲವಾರು ರೈತ ಮುಖಂಡರು ಪಾಲ್ಗೊಂಡಿದ್ದರು.
.

