ಮಂಗಳೂರು : ಅದ್ಯಪಾಡಿ ದೈವಂಗಳಗುಡ್ಡೆ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಾ.15ರಿಂದ 20ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮಾ.18ಕ್ಕೆ ರುದ್ರಯಾಗ, 19ರಂದು ಸಹಸ್ರ ನಾಳಿಕೇರ ಮಹಾಗಣಪತಿ ಹೋಮ, 20ರಂದು ಬ್ರಹ್ಮಕಲಶಾಭಿಷೇಕ ನಡೆಯಲಿದೆ ಎಂದು ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ನಾಗರಾಜ ಶೆಟ್ಟಿ ತಿಳಿಸಿದರು.

ಅವರು ದೇವಾಲಯದ ಪ್ರಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ 2 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಆಡಳಿತ ಮೊಕ್ತೇಸರ ಎ.ಮಂಜುನಾಥ ಭಂಡಾರಿ ಶೆಡ್ಡೆ ಅವರ ಮಾರ್ಗದರ್ಶನದಲ್ಲಿ ಎಲ್ಲಾ ಕಾರ್ಯಗಳು ವಿಧಿವತ್ತಾಗಿ ನಡೆಯುತ್ತಿದೆ ಎಂದರು.
ಕ್ಷೇತ್ರದ ಆಡಳಿತ ಮೊಕ್ತೇಸರ ಎ. ಮಂಜುನಾಥ ಭಂಡಾರಿ ಶೆಡ್ಡೆ ಅವರ ನೇತೃತ್ವದಲ್ಲಿ ನಾಲ್ಕನೇ ಬಾರಿ ನೀಲಕಂಠ ಉಮಾಮಹೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ಮಾರ್ಚ್ 15 ರಂದು ಹೊರೆಕಾಣಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.

ದೈವ ದೇವರು ನೆಲೆವೀಡು ಬೈಲುಮಾಗಣೆ ಅದ್ಯಪಾಡಿ ಪುಣ್ಯ ಕ್ಷೇತ್ರಗಳಲ್ಲಿ ನೀಲಕಂಠ ಉಮಾಮಹೇಶ್ವರ ದೇವಸ್ಥಾನ ಕೂಡ ಭಕ್ತರ ಮನೋಭೀಷ್ಟವನ್ನು ಅನುಗ್ರಹಿಸುವ ಮಹಾಗಣಪತಿ ದೇವರು, ಈಶ್ವರ ದೇವರು ಮತ್ತು ನಾಗದೇವರ ಜತೆಗೆ ದೈವಂಗಳಗುಡ್ಡೆಯ ದೈವಗಳ ಸಾನಿಧ್ಯ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಸಾವಿರಾರು ವರ್ಷಗಳ ಇತಿಹಾಸ ಇರುವ ಈ ದೇವಾಲಯಕ್ಕೆ ವಿಶಿಷ್ಟ ಶಕ್ತಿ ಇದೆ ಎಂದು ತಿಳಿಸಿದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ, ದೇವಸ್ಥಾನದ ಮೊಕ್ತೇಸರರಾದ ಮಂಜುನಾಥ ಭಂಡಾರಿ ಶೆಡ್ಡೆ ಅವರ ನೇತೃತ್ವದಲ್ಲಿ ನಾಲ್ಕನೇ ಸಲದ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ನಾಲ್ಕು ಬಾರಿಯೂ ನಡೆದ ಬ್ರಹ್ಮಕಲಶೋತ್ಸವ ಸನಾತನ ಧರ್ಮದ ಸೂತ್ರಕ್ಕೆ ಅನುಗುಣವಾಗಿ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುತ್ತಿದೆ ಎಂದರು.

ಸಾಮಾಜಿಕ ಬದ್ಧತೆ ಹೊಂದಿರುವ ದೇವಳದಲ್ಲಿ ಮದುವೆ, ಉಪನಯನ ಮುಂತಾದ ಕಾರ್ಯಕ್ರಮಗಳಿಗೆ 18,000 ಚದರ ಅಡಿಗೂ ಮಿಕ್ಕಿದ ವಿಸ್ತೀರ್ಣದ ಸಭಾಂಗಣದ ಜತೆಗೆ ಆಸನಗಳು, ಪಾಕಶಾಲೆಯಲ್ಲದೆ ವಿದ್ಯುತ್ ಅನ್ನು ಇಪ್ಪತ್ತೈದು ವರ್ಷಗಳಿಂದಲೂ ಉಚಿತವಾಗಿ ನೀಡಲಾಗುತ್ತಿದೆ. ಪ್ರತಿ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ದೇವಳಕ್ಕೆ ಪೂರಕವಾಗಿ ಭಕ್ತರ ಅನುಕೂಲಕ್ಕೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಸಮಾಜದ ಬಂಧುಗಳ ಸಹೃದಯಿ ಸಹಕಾರದಿಂದ ನಡೆಸಿಕೊಂಡು ಬರುತ್ತಿದ್ದು, ಪ್ರಸಕ್ತ ಸಾಲಿನ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಸುಮಾರು ಎರಡು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಮಗಾರಿಗಳನ್ನು ಹಮ್ಮಿಕೊಂಡಿದ್ದು ದಾನಿಗಳ ಸಹಕಾರದಿಂದ ಅವೆಲ್ಲವೂ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದರು.

ಆರು ದಿನಗಳ ಕಾಲ ನಡೆವ ಈ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಬರುವ ಎಲ್ಲ ಭಕ್ತರಿಗೆ ಬೆಳಗ್ಗೆ ಹಾಗೂ ಸಂಜೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಭೋಜನ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ. ಬ್ರಹ್ಮಕಲಶೋತ್ಸವದ ಈ ಆರೂ ದಿನಗಳ ಕಾಲ ನಡೆಯುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಊರ ಪರವೂರಿನ ಸಮಸ್ತ ಭಕ್ತ ಬಂಧುಗಳು ಸಕುಟುಂಬಿಕರಾಗಿ ಪಾಲ್ಗೊಂಡು ದೇವರ ಪೂರ್ಣ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮೊಕ್ತೇಸರ ಎ. ಮಂಜುನಾಥ ಭಂಡಾರಿ ಶೆಡ್ಡೆ , ಕಾರ್ಯಾಧ್ಯಕ್ಷ ಹರೀಶ್ ಶೆಟ್ಟ ಏತಮೊಗರು ದೊಡ್ಡಮನೆ ಬೈಲುಮೂಡುಕರೆ, ಸ್ವಾಗತ ಸಮಿತಿ ಗೌರವಾಧ್ಯಕ್ಷ ಭುಜಂಗ ಶೆಟ್ಟಿ ಚೆಪುಗುಡ್ಡೆ ಗುತ್ತು, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ ಅಡ್ಯಾರ್ ಕಟ್ಟೆ , ದಿವಾಕರ ಸಾಮಾನಿ ಚೇಳಾರು ಗುತ್ತು, ಸತೀಶ್ ಆಳ್ವ ಬೈಲುಮೂಡುಕರೆ, ಕೋಶಾಧಿಕಾರಿ ಸಂತೋಷ್ ಶೆಟ್ಟಿ ಶೆಡ್ಡೆ, ಜಯರಾಮ ಕೊಟ್ಟಾರಿ ಶೆಡ್ಡೆ, ಹೊರೆಕಾಣಿಕೆ ಸಮಿತಿಯ ಅಧ್ಯಕ್ಷರಾದ ರಮಾನಾಥ , ಡಾ.ಆಶಾಜ್ಯೋತಿ ರೈ, ದೇವದಾಸ್ ನಾಯಕ್, ಅದ್ಯಪಾಡಿ ಗುತ್ತು ರಾಜೀವ್ ಆಳ್ವ, ಬಾಲಕೃಷ್ಣ.ರೈ ಕೊಳಂಬೆಗುತ್ತು, ಅಶ್ವಿನ್ ಬಳ್ಳಾಲ್ ಉಪಸ್ಥಿತರಿದ್ದರು.
ಚಿತ್ರ : ಸತೀಶ್ ಕಾಪಿಕಾಡ್

