ಜಮ್ಮು: ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಮತ್ತು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ಮೇಲೆ ಬುಧವಾರ ರಾತ್ರಿ ಗುಂಡಿನ ದಾಳಿ ನಡೆದಿದ್ದು, ಪವಾಡಸದೃಶವಾಗಿ ಪಾರಾಗಿದ್ದಾರೆ. ಜಮ್ಮುವಿನ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿರುವ ರಾಯಲ್ ಪಾರ್ಕ್ ಹೋಟೆಲ್ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಹೊರಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಜಮ್ಮುವಿನ ಒಂದು ಮದುವೆ ಸಮಾರಂಭದಲ್ಲಿ ಭಾಗವಹಿಸಿ ಹೊರಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸಮಾರಂಭ ಮುಗಿಸಿ ಹೊರಟು ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಬಂದೂಕುಧಾರಿಯೊಬ್ಬ ಫಾರೂಕ್ ಅಬ್ದುಲ್ಲಾ ಅವರ ಮೇಲೆ ಗುಂಡು ಹಾರಿಸಿದ್ದಾನೆ. ಆದರೆ ಅದೃಷ್ಟವಶಾತ್ ಗುಂಡು ಅವರನ್ನು ತಾಗದೇ ತಪ್ಪಿದ್ದು, ಇದರಿಂದ ಅವರು ಪಾರಾಗಿದ್ದಾರೆ.
ಘಟನೆ ನಡೆದ ವೇಳೆ ಜಮ್ಮು ಮತ್ತು ಕಾಶ್ಮೀರದ ಉಪಮುಖ್ಯಮಂತ್ರಿ ಸುರೀಂದರ್ ಚೌಧರಿ ಹಾಗೂ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಸಲಹೆಗಾರ ನಾಸಿರ್ ಅಸ್ಲಂ ವಾನಿ ಕೂಡ ಫಾರೂಕ್ ಅಬ್ದುಲ್ಲಾ ಅವರ ಜೊತೆಗಿದ್ದರು. ಈ ಘಟನೆಯಿಂದ ಕೆಲ ಕ್ಷಣಗಳ ಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಗುಂಡಿನ ದಾಳಿ ನಡೆದ ತಕ್ಷಣವೇ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ 63 ವರ್ಷದ ಕಮಲ್ ಸಿಂಗ್ ಜಮ್ಯಾಲ್ ಎಂದು ಗುರುತಿಸಲಾಗಿದೆ. ಆತ ಜಮ್ಮುವಿನ ಪುರಾಣಿ ಮಂಡಿ ಪ್ರದೇಶದ ನಿವಾಸಿಯಾಗಿದ್ದು, ಅಜಿತ್ ಸಿಂಗ್ ಅವರ ಪುತ್ರ ಎಂದು ತಿಳಿದುಬಂದಿದೆ.
ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿ ನೀಡಿದ ಹೇಳಿಕೆ ಹಲವು ಅಚ್ಚರಿಯ ಸಂಗತಿಗಳನ್ನು ಬಹಿರಂಗಪಡಿಸಿದೆ. ಕಳೆದ 20 ವರ್ಷಗಳಿಂದ ಫಾರೂಕ್ ಅಬ್ದುಲ್ಲಾ ಅವರನ್ನು ಗುರಿಯಾಗಿಸಿ ದಾಳಿ ಮಾಡಲು ಅವಕಾಶ ಹುಡುಕುತ್ತಿದ್ದೆ ಎಂದು ಆತ ಹೇಳಿದ್ದಾನೆ. ಹಲವು ಬಾರಿ ಪ್ರಯತ್ನಿಸಿದ್ದರೂ ಸೂಕ್ತ ಸಂದರ್ಭ ಸಿಗಲಿಲ್ಲ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

