ಮಂಗಳೂರು : ಶಾಸ್ತ್ರೀಯ ಸಂಗೀತ ಮತ್ತು ಸಾಂಸ್ಕೃತಿಕ ಪರಂಪರೆಯ ಆಚರಣೆಯಲ್ಲಿ, ಶ್ರೀ ನಾರಾಯಣಿ ಸಂಗೀತ ಕಲಾ ಕೇಂದ್ರ ಸಹಯೋಗದೊಂದಿಗೆ, ಮಂಗಳೂರಿನ ದಿ ಗೌಡ್ ಸಾರಸ್ವತ ಬ್ರಾಹ್ಮಣ ಸೇವಾ ಸಂಘವು ಅಸಾಧಾರಣ ಯುವ ಕಲಾವಿದರನ್ನು ಒಗ್ಗೂಡಿಸಿಕೊಂಡು ವಸಂತ ಸಂಗೀತೋತ್ಸವ ಎನ್ನುವ ಕಾರ್ಯಕ್ರಮವನ್ನು ಮಾರ್ಚ್ 15 ರ ಭಾನುವಾರ ಸಂಜೆ 4:00 ರಿಂದ ರಾತ್ರಿ 8:00 ರವರೆಗೆ ನಗರದ ಸುಜೀರ್ ಸಿ.ವಿ.ನಾಯಕ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಎಸ್ ಬಿ ಸೇವಾ ಸಂಘದ ಅಧ್ಯಕ್ಷರಾದ ಡಾ.ಕಸ್ತೂರಿ ಮೋಹನ್ ಪೈ ತಿಳಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದಲ್ಲಿ ವಿದುಷಿ ನಂದಿತಾ ಪೈ. ವಿಭಾ ನಾಯಕ್. ಶಾಂತೇರಿ ಕಾಮತ್ ಮತ್ತು ವಿದುಷಿ ಮೇಘಾ ಪೈ ಸೇರಿದಂತೆ ಪ್ರತಿಭಾನ್ವಿತ ಯುವ ಕಲಾವಿದರಿಂದ ಹಿಂದೂಸ್ತಾನಿ ಗಾಯನ ಸಂಗೀತ ಪ್ರದರ್ಶನ ನಡೆಯಲಿದೆ ಎಂದರು.
ಸುಮಧುರ ಸಂಜೆಗೆ ಹೆಚ್ಚುವರಿಯಾಗಿ ಪಿ.ಕಾರ್ತಿಕ್ ಭಟ್ ಅವರಿಂದ ಆತ್ಮವನ್ನು ಕಲಕುವ ಬಾನ್ಸುರಿ ವಾದನ. ಶ್ರೀವತ್ಸ ಭಟ್ ಮತ್ತು ರಾಜೇಶ್ ಭಾಗವತ್ ತಬಲಾದಲ್ಲಿ ಮತ್ತು ಮೇಧಾ ಭಟ್ ಮತ್ತು ಹೇಮಂತ್ ಭಾಗವತ್ ಹಾರ್ಮೋನಿಯಂನಲ್ಲಿ ಸಾಥ್ ನೀಡಲಿದ್ದಾರೆ. ಈ ವರ್ಷದ ಕಾರ್ಯಕ್ರಮದ ವಿಶಿಷ್ಟ ಲಕ್ಷಣವೆಂದರೆ ಸಾಂಪ್ರದಾಯಿಕ ಶಾಸ್ತ್ರೀಯ ರಾಗಗಳಿಗೆ ಹೊಂದಿಸಲಾದ ವಿಶೇಷ ಕೊಂಕಣಿ ಸಂಯೋಜನೆಗಳ ಪ್ರಸ್ತುತಿ ಇರಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಾ.ರಮೇಶ್ ಪೈ ಎ, ಕುಂಬಳೆ ನರಸಿಂಹ ಪ್ರಭು, ವಿದುಷಿ ನಂದಿತಾ ಪೈ ,ಎಂ.ಆರ್. ಕಾಮತ್ ,ಸುಚಿತ್ರಾ ಶೆಣೈ ,ವೆಂಕಟೇಶ್ ಬಾಳಿಗಾ ಉಪಸ್ಥಿತರಿದ್ದರು .

