ಮಂಗಳೂರು : ವಿಶ್ವ ಕಿಡ್ನಿ ದಿನವನ್ನು ಪ್ರತಿ ವರ್ಷ ಮಾರ್ಚ್ ತಿಂಗಳ ಎರಡನೇ ಗುರುವಾರದಂದು ಆಚರಿಸಲಾಗುತ್ತದೆ .ವಿಶ್ವ ಕಿಡ್ನಿ ದಿನದ ಅಂಗವಾಗಿ ಕೆಎಂಸಿ ಆಸ್ಪತ್ರೆ ಮಂಗಳೂರು , ಶೀಘ್ರ ರೋಗ ಪತ್ತೆ, ಚಿಕಿತ್ಸೆ ಮತ್ತು ಕಿಡ್ನಿ ಸಮಸ್ಯೆಯ ದೀರ್ಘ ಕಾಲದ ನಿರ್ವಹಣೆಯನ್ನು ಗುರಿಯಾಗಿಸಿ ತನ್ನ ಸಮಗ್ರ ಕಿಡ್ನಿ ಆರೈಕೆಯನ್ನು ನೆಫ್ರಾಲಜಿ ವಿಭಾಗವು ದಿನದ 24 ಗಂಟೆಯೂ ನೀಡುತ್ತಾ ಬಂದಿದೆ ಎಂದು ನೆಫ್ರಾಲಜಿ ತಜ್ಞ, ಡಾ ಅಶೋಕ್ ಭಟ್ ತಿಳಿಸಿದರು.
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಿಡ್ನಿ ರೋಗಗಳ ಲಕ್ಷಣಗಳು ಸಾಮಾನ್ಯವಾಗಿ ಮುಂದುವರೆದ ಹಂತದಲ್ಲಿ ಮಾತ್ರ ಗೋಚರವಾಗುವ ಕಾರಣದಿಂದ ಅನೇಕರು ಆರಂಭಿಕ ಹಂತದಲ್ಲೇ ಸಮಸ್ಯೆಯನ್ನು ಗುರುತಿಸಲು ಸಾಧ್ಯವಾಗುವುದಿಲ್ಲ, ಆದರೆ ರಕ್ತದೊತ್ತಡ ಮತ್ತು ಮಧುಮೇಹ ಇರುವರು ,ವಂಶ ಪಾರಂಪರಿಕ ಕಿಡ್ನಿರೋಗ ಹೊಂದಿದವರು ಅಪಾಯವನ್ನು ತಡೆಗಟ್ಟಲು ರಕ್ತ ಮತ್ತು ಮೂತ್ರ ಪರೀಕ್ಷೆ ಅಥವಾ ಮುಂದುವರೆದ ಪರೀಕ್ಷೆ ಮಾಡಿಸುವುದು ಮಾಡುವುದು ಉತ್ತಮ ಎಂದು ತಿಳಿಸಿದರು

ಹಿರಿಯ ನೆಫ್ರಾಲಜಿ ತಜ್ಞ ಡಾ.ಸುಶಾಂತ್ ಕುಮಾರ್ ಮಾತನಾಡಿ, ಎಲ್ಲಾ ಕಿಡ್ನಿ ಸಮಸ್ಯೆಗಳಿಗೆ ಡಯಾಲಿಸಿಸ್ ಮಾತ್ರ ಪರಿಹಾರವಲ್ಲ. ಸಾಮಾನ್ಯವಾಗಿ ಸಿಕೆಡಿ 5ನೇ ಹಂತದಲ್ಲಿ ಅಥವಾ ತೀವ್ರ ಸಮಸ್ಯೆಗಳು ಕಂಡುಬಂದಾಗ ಡಯಾಲಿಸಿಸ್ ಆರಂಭಿಸಲಾಗುತ್ತದೆ. ಕಿಡ್ನಿ ಫೆಲ್ಯೂರ್ ಸಮಸ್ಯೆಗೆ ಮೂತ್ರಪಿಂಡ ಕಸಿ ಉತ್ತಮ ವಿಧಾನವಾಗಿದ್ದು, ಸರ್ಕಾರದ ‘ಜೀವ ಸಾರ್ಥಕತೆ’ ಯೋಜನೆಯ ಮೂಲಕ ಅಂಗಾಂಗ ದಾನಕ್ಕೂ ಅವಕಾಶವಿದೆ ಎಂದು ತಿಳಿಸಿದರು.

ಕೆಎಂಸಿ ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ಹೆಚ್ಒಡಿ ಡಾ. ಮಯೂರ್ ಪ್ರಭು ಮಾತನಾಡಿ, ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಅಡ್ವಾನ್ಸ್ಡ್ ಡಯಾಲಿಸಿಸ್, ಮೂತ್ರಪಿಂಡ ಕಸಿ ಹಾಗೂ ಸುಧಾರಿತ ಪರೀಕ್ಷಾ ಸೌಲಭ್ಯಗಳೊಂದಿಗೆ ಸಮಗ್ರ ನೆಫ್ರಾಲಜಿ ಸೇವೆ ಒದಗಿಸಲಾಗುತ್ತಿದೆ. ತಜ್ಞರ ತಂಡವು ವರ್ಷಪೂರ್ತಿ 24 ಗಂಟೆಗಳ ಕಾಲ ಆರೋಗ್ಯ ಸೇವೆ ನೀಡುತ್ತಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನೆಫ್ರಾಲಜಿ ತಜ್ಞ ದುಷ್ಯಂತ್ ಬಿ , ಸಂಸ್ಥೆಯ ಹಿರಿಯ ವ್ಯವಸ್ಥಾಪಕರಾದ ರಾಕೇಶ್ ಉಪಸ್ಥಿತರಿದ್ದರು .

