ಕಟಪಾಡಿ : ಶ್ರೀ ಕ್ಷೇತ್ರ ಶಂಕರಪುರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ 19 ಅಡಿ ಎತ್ತರದ ಏಕ ಶಿಲಾ ಬಜರಂಗಿಯ ಪ್ರವೇಶವು ಮಾ. 14ರಂದು ಸಂಜೆ 3.30ಕ್ಕೆ ಉಡುಪಿ ಜೋಡುಕಟ್ಟೆಯಿಂದ ಭವ್ಯ ಮೆರವಣಿಗೆಯೊಂದಿಗೆ ಆರಂಭಗೊಳ್ಳಲಿದೆ ಎಂದು ಶ್ರೀ ಸಾಯಿ ಈಶ್ವರ ಗುರೂಜಿ ಹೇಳಿದರು.
11 ವರ್ಷಗಳಿಂದ ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿರುವ ಶ್ರೀ ಸಾಯಿ ಈಶ್ವರ ಗುರೂಜಿ ಅವರು ಶ್ರೀ ಕ್ಷೇತ್ರದ ಆವರಣದಲ್ಲಿ ಹಿಂದೂ ಬಾಂಧವರ ಒಗ್ಗಟ್ಟು ಮತ್ತು ಏಳಿಗೆಯ ಮಹಾ ಸಂಕಲ್ಪದೊಂದಿಗೆ 60 ಲಕ್ಷ ರೂ. ವೆಚ್ಚದಲ್ಲಿ 19 ಅಡಿ ಎತ್ತರದ ಏಕ ಶಿಲಾ ಶ್ರೀ ಮುಖ್ಯಪ್ರಾಣನ ಮೂರ್ತಿ ಪ್ರತಿಷ್ಠೆಯನ್ನು ಎ. 2ರಂದು ನಡೆಯಲಿದೆ ಎಂದರು.
ಬಜಗೋಳಿಯ ಶ್ರೀದೇವಿ ಶಿಲ್ಪಕಲಾದ ಗಣೇಶ ಶಿಲ್ಪಿ ಅವರಿಂದ ಕೆತ್ತಲ್ಪಟ್ಟ ಬಜರಂಗಿಯು ಬಜಗೋಳಿಯಿಂದ ಹೊರಟು ಕಾರ್ಕಳ ಆನೆಕೆರೆ ಶ್ರೀ ಕೃಷ್ಣ ಮಂದಿರ ಮತ್ತು ಮಟ್ಟಾರು ಅಡಪಾಡಿ ಶ್ರೀಉಮಾಮಹೇಶ್ವರೀ ದೇವಸ್ಥಾನದಲ್ಲಿ ಪೂಜೆಯನ್ನು ಪೂರೈಸಿಕೊಂಡು ಹಿರಿಯಡ್ಕ-ಪರ್ಕಳ-ಮಣಿಪಾಲ ಮಾರ್ಗವಾಗಿ ಉಡುಪಿ ಅಲ್ಲಿಂದ ಜೋಡುಕಟ್ಟೆಗೆ ಆಗಮಿಸಲಿದೆ. ವಾಹನಗಳ ಭವ್ಯ ಮೆರವಣಿಗೆಯಲ್ಲಿ ಕುರ್ಕಾಲು ಸುಭಾಸ್ ನಗರ ಜಂಕ್ಷನ್ಗೆ ತಲುಪಿ ಬಳಿಕ ಕಾಲ್ನಡಿಗೆಯ ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ತಲುಪಲಿದೆ ಎಂದರು.

