ಮಂಗಳೂರು : ಮೂಡಬಿದ್ರೆಯ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರ ಮೇಲೆ ವೈಯಕ್ತಿಕ ದ್ವೇಷವನ್ನು ಮುಂದಿಟ್ಟುಕೊಂಡು, ನನ್ನ ತಂಗಿ ಸುಮತಿ ನಾಯ್ಕ್ ತೇಜೋವಧೆ ಮಾಡುತ್ತಿದ್ದಾಳೆ ಎಂದು ಆಕೆಯ ಸಹೋದರಿ ಬೆಳುವಾಯಿ ನಿವಾಸಿ ಪ್ರಫುಲ್ಲ ನಾಯ್ಕ್ ಹೇಳಿದ್ದಾರೆ.
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಸುಧ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನ ತಂಗಿ ಸುಮತಿ ನಾಯ್ಕ್ ಸಮಾಜ ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು ಆಕೆಯ ಮೇಲೆ ಕಾರ್ಕಳ, ಬೆಳ್ತಂಗಡಿ, ತಮಿಳುನಾಡು ಮತ್ತಿತರ ಕಡೆ ವೇಶ್ಯಾವಾಟಿಕೆ ನಡೆಸಿರುವ ಪ್ರಕರಣಗಳು ಇವೆ. ಅಲ್ಲದೆ ತಮಿಳುನಾಡಿನಲ್ಲಿ ಜೈಲುವಾಸವನ್ನೂ ಅನುಭವಿಸಿದ್ದಾಳೆ. ಅಮ್ಮನ ಪೋರ್ಜರಿ ಸಹಿ ಮಾಡಿ ನಮ್ಮ ಪಿತ್ರಾರ್ಜಿತ ಆಸ್ತಿಯನ್ನು ಲಪಟಾಯಿಸಿದ್ದಾಳೆ. ತನಗೆ ಉದ್ಯೋಗ ಇಲ್ಲದಿದ್ದರೂ 75 ಲಕ್ಷದ ಮನೆಯನ್ನು ಹೇಗೆ ಕಟ್ಟಿದ್ದಾಳೆ ಎಂದು ಪ್ರಪುಲ್ಲ ನಾಯ್ಕ್ ಆರೋಪಿಸಿದ್ದಾರೆ.

ಬೆಳುವಾಯಿಯಲ್ಲಿ ನನ್ನ ಮಗ ಹಾಗೂ ಗಂಡನ ಜೊತೆ ವಾಸಿಸುತ್ತಿದ್ದ ಸಂದರ್ಭ ನನ್ನ ಗಂಡ ಹಾಗೂ ಮಗ ಸುಮತಿ ಅವರ ಮನೆಗೆ ಹೋಗಿದ್ದರು. ಆದರೆ ಅವರು ವಾಪಸ್ ಬಾರದೆ ಇದ್ದಾಗ ಮೂಡಬಿದ್ರೆ ಠಾಣೆಗೆ ದೂರು ಕೊಡಲು ಹೋಗಿದ್ದೆ. ದೂರು ಸ್ವೀಕರಿಸಿದ ಪೊಲೀಸರು ನನ್ನ ಗಂಡನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ, ನಿಮ್ಮ ಮೇಲೆ ನಿಮ್ಮ ಹೆಂಡತಿ ದೂರು ನೀಡಿದ್ದಾರೆ. ಕೂಡಲೇ ಠಾಣೆಗೆ ಬನ್ನಿ ಎಂದು ಕರೆದಿದ್ದರು. ಆಗ ಸುಮತಿ ಹಾಗೂ ಗಂಡ ಠಾಣೆಗೆ ಬಂದಿದ್ದು, ಪೊಲೀಸರ ಜೊತೆ ಏರುಧ್ವನಿಯಲ್ಲಿ ಮಾತಾಡಿ, ನನಗೆ ಚಪ್ಪಲಿಯಿಂದ ಹೊಡೆದಿದ್ದಳು. ಪೊಲೀಸರು ತಡೆಯಲು ಬಂದಾಗ ಸಾರ್ವಜನಿಕರ ಮುಂದೆಯೇ ಅವರ ಮೇಲೂ ಹಲ್ಲೆಗೆ ಯತ್ನಿಸಿದ್ದಳು. ಇದನ್ನು ಪೊಲೀಸರು ತಡೆದಾಗ ಹತಾಶೆಯಿಂದ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಪೊಲೀಸ್ ಅಧಿಕಾರಿ ತನಗೆ ಹಲ್ಲೆ ಮಾಡಿದ್ದಾರೆಂದು ಸುಮತಿ ಆರೋಪಿಸಿದ್ದರು.

ಈಕೆಯ ವಿರುದ್ಧ ಬೆಂಗಳೂರಿನ ಮಡಿವಾಳ ಪೊಲೀಸ್ ಸ್ಟೇಷನ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ಬಿಟಿಎಂ ಲೇಔಟ್ನ ಕೆ.ಎ.ಎಸ್ ಕಾಲೋನಿಯಲ್ಲಿ ಪೊಲೀಸರು ದಾಳಿ ನಡೆಸಿದಾಗ ಸಾರ್ವಜನಿಕರನ್ನು ವೇಶ್ಯಾವಾಟಿಕೆಗೆ ಪ್ರಚೋದಿಸುತ್ತಿರುವುದು ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಈಕೆ ಹಾಗೂ ಬೆಂಗಳೂರಿನ ಕಾರ್ತಿಕೇಯನ್ ಎಂಬಾತನನ್ನು ಬಂಧಿಸಿದ್ದರು.
ಮೂಡಬಿದ್ರೆ ಇನ್ಸ್ ಪೆಕ್ಟರ್ ಒಳ್ಳೆಯವರು. ನಮ್ಮ ಕುಟುಂಬದ ನಡುವೆ ಇರುವ ಒಡಕಿನ ಕುರಿತು ಅವರು ನ್ಯಾಯ ಕೊಡಿಸಲು ಮುಂದಾಗಿದ್ದಕ್ಕೆ ನನ್ನ ತಂಗಿ ಈ ರೀತಿಯ ಷಡ್ಯಂತ್ರವನ್ನು ಮಾಡಿದ್ದಾಳೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸುವರ್ಣ ರಾಜ್ಯ ಸಮಿತಿ ಇದರ ರಾಜ್ಯಾಧ್ಯಕ್ಷರಾದ ವರ್ತೂರು ಮಂಜುನಾಥ್ ,ಸಮಿತಿಯ ಸದಸ್ಯರಾದ ಹರೀಶ್ ಉಪಸ್ಥಿತರಿದ್ದರು .

