ಮಂಗಳೂರು : ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 21ರಂದು ಸಂಜೆ 7.30ಕ್ಕೆ ನಗರದ ಹೊಟೇಲ್ ಸೀ ವ್ಯೂವ್ನ ಸಭಾಂಗಣದಲ್ಲಿ ರಾಜ್ಯ ಮಟ್ಟದ “ವಂದನಾ ಪ್ರಶಸ್ತಿ – 2026″ ಯನ್ನು ಈ ಬಾರಿ ಹಸಿರು ಕ್ರಾಂತಿಕಾರ ಡಾ.ಆರ್.ಕೆ. ನಾಯರ್ ಅವರಿಗೆ ನೀಡಲಾಗುವುದೆಂದು ರೋಟರಿ ಸಂಸ್ಥೆಯ ಅಧ್ಯಕ್ಷ, ರೋ। ಭಾಸ್ಕರ್.ರೈ.ಕಟ್ಟಾ ತಿಳಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಸರಗೋಡು ಮೂಲದ ಹಸಿರು ಕ್ರಾಂತಿಕಾರ ಹಾಗೂ ಪರಿಸರ ಪ್ರೇಮಿ ಡಾ. ಆರ್.ಕೆ.ನಾಯರ್ರವರು ಭಾರತ ದೇಶದ ಹಸಿರು ನಾಯಕ ಎಂದು ಖ್ಯಾತಿ ಪಡೆದವರು ಈ ಬಾರಿ ಆಯ್ಕೆಯಾಗಿದ್ದಾರೆ. ಅವರು ದೇಶದ 12 ರಾಜ್ಯಗಳಲ್ಲಿ ಸಾವಿರಾರು ಎಕ್ರೆ ಬಂಜರು ಭೂಮಿಯನ್ನು ಜಪಾನ್ ರಾಷ್ಟ್ರ ಮಾದರಿಯ ಮಿಯಾವಾಕಿ ಅರಣ್ಯ ಪ್ರದೇಶವಾಗಿ ಪರಿವರ್ತಿಸಿದ್ದನ್ನು ಪರಿಗಣಿಸಿ ಅವರ ಅಮೂಲ್ಯ ಕೊಡುಗೆ ಮತ್ತು ಸಾಧಿಸಿದ ಗಣನೀಯ ಸಾಧನೆಯನ್ನು ಪ್ರಶಂಸಿಸಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು. ಈ ಪ್ರಶಸ್ತಿಯು ಪ್ರಶಸ್ತಿ ಫಲಕ, ಪ್ರಶಸ್ತಿ ಪ್ರಮಾಣ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ ಎಂದರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರುರವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪ್ರಶಸ್ತಿ ವಿಜೇತರನ್ನು ಅಭಿನಂದಿಸಿ ಪ್ರಶಸ್ತಿ ಪ್ರದಾನ ಮಾಡಲಿರುವರು. ರೋಟರಿ ಮಂಗಳೂರು ಸೆಂಟ್ರಲ್ ಅಧ್ಯಕ್ಷರಾದ ರೋ। ಭಾಸ್ಕರ್ ರೈ ಕಟ್ಟಾ ಅಧ್ಯಕ್ಷತೆ ವಹಿಸಲಿರುವರು. ರೋಟರಿ ಜಿಲ್ಲಾ 3181ರ ಸಹಾಯಕ ಗರ್ವನರ್ ರೋ। ಪ್ರೋ ಡಾ. ಚಿನ್ನಗಿರಿ ಗೌಡ, ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿ ಮೈಸೂರು ನಗರ ಮೂಲದ ರೋ। ಪ್ರಜ್ವಲ್ ಆರ್., ಗೌರವ ಅತಿಥಿಯಾಗಿ ಸಮಾರಂಭದಲ್ಲಿ ಪಾಲ್ಗೊಳಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಆಯ್ಕೆ ಸಮಿತಿಯ ಸಭಾಪತಿಯಾದ ರೋ। ಡಾ। ದೇವದಾಸ್ ರೈ , ರೋಟರಿ ಸಂಸ್ಥೆಯ ಕಾರ್ಯದರ್ಶಿ, ರೋ। ವಿಕಾಸ್ ಕೋಟ್ಯಾನ್, ರೋಟರ್ಯಾಕ್ಟ್ ಮಂಗಳೂರು ಸಿಟಿಯ ಅಧ್ಯಕ್ಷರಾದ ರೋ ಅಕ್ಷಯ್ ಬಿ. ರೈ ಮತ್ತು ಮಾಧ್ಯಮ ಸಲಹೆಗಾರರಾದ ರೋ। ಎಂ.ವಿ. ಮಲ್ಯ ಸಹಿತ ಇನ್ನಿತ್ತರರು ಉಪಸ್ಥಿತರಿದ್ದರು .

