ಮಂಗಳೂರು : ಕರ್ನಾಟಕದಲ್ಲಿ ತುಳು ಭಾಷೆಗೆ ಶೀಘ್ರದಲ್ಲೇ ಎರಡನೇ ಅಧಿಕೃತ ಭಾಷೆಯ ಸ್ಥಾನ ಪಡೆಯುವುದು ಖಚಿತ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು.
ಅವರು ಶುಕ್ರವಾರ ನಡೆದ ತುಳು ವಿದ್ಯಾರ್ಥಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ , ಮೋಹನ ಆಳ್ವ ನೇತೃತ್ವದ ಸಮಿತಿ ಮತ್ತು ತಾರಾನಾಥ ಗಟ್ಟಿ ನೇತೃತ್ವದ ಸಮಿತಿಗಳು ಈಗಾಗಲೇ ವರದಿ ಸಲ್ಲಿಸಿವೆ. ಸರ್ಕಾರದ ಮೇಲೆ ಒತ್ತಡ ಇರುವುದರಿಂದ 2ನೇ ಅಧಿಕೃತ ಭಾಷೆಯನ್ನಾಗಿ ಮಾಡುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು .
ನಮ್ಮ ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಅಧಿಕೃತ ಭಾಷೆಗಳು ಇವೆ. ಪಶ್ಚಿಮ ಬಂಗಾಳದಲ್ಲಿ ರಾಜ್ಯಭಾಷೆ ಹೊರತುಪಡಿಸಿ ಇತರ 5 ಅಧಿಕೃತ ಭಾಷೆಗಳು ಇವೆ. ಅಧಿಕೃತ ಭಾಷೆಯಾದರೂ ಎಂಟನೇ ಪರಿಚ್ಛೇದಕ್ಕೆ ಸೇರಿದರೂ ಭಾಷೆಯನ್ನು ಬಳಸದೇ ಇದ್ದರೆ ಉಳಿಯುವುದು ಕಷ್ಟ. ಆದ್ದರಿಂದ ಯುವಜನತೆ ಸ್ಥಳೀಯ ಭಾಷೆಯನ್ನು ಬಳಸಲು ಮುಂದಾಗಬೇಕು. ಹೆಚ್ಚು ಬಳಕೆಯಲ್ಲಿರುವ ಭಾಷೆಗಳು ವೇಗವಾಗಿ ಬೆಳೆಯುತ್ತಿವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪರಿಸರ ಪ್ರವಾಸೋದ್ಯಮ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೊ, ಪ್ರಾಂತ ರೈತ ಸಂಘದ ಅಧ್ಯಕ್ಷ ಯಾದವ ಶೆಟ್ಟಿ, ರೈತ ಸಂಘದ ಮುಖಂಡ ದೇವದಾಸ್ ಪಾಲ್ಗೊಂಡಿದ್ದರು.

