ನಾಲಾಸೋಪಾರದಲ್ಲಿ ತುಳುಕೂಟ ಫೌಂಡೇಶನ್ ಮತ್ತು ಶ್ರೀದೇವಿ ಯಕ್ಷಕಲಾ ನಿಲಯ ಜಂಟಿಯಾಗಿ ವಿಶ್ವ ಮಹಿಳಾ ದಿನಾಚರಣೆ ಹಾಗೂ ಹಳದಿ ಕುಂಕುಮ ಕಾರ್ಯಕ್ರಮವನ್ನು ಹೋಟೆಲ್ ಗ್ಯಾಲಕ್ಸಿ ಸಭಾಂಗಣದಲ್ಲಿ ಶಶಿಧರ ಕೆ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಯಶೋಧಾ ಎಸ್. ಕೋಟ್ಯಾನ್ ಮತ್ತು ತಂಡದಿಂದ ದೇವರಿಗೆ ಆರತಿ ಬೆಳಗಿಸಿ ಹಳದಿ ಕುಂಕುಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಭಜನೆ, ಸ್ವಾಗತ ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯಿತು.

ಸಂಜೆಯ ಸಭೆಯಲ್ಲಿ ‘ತುಳುನಾಡ ಐಸಿರಿ’ ಪ್ರಶಸ್ತಿಯನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿಗೆ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಶಶಿಧರ ಶೆಟ್ಟಿ, ತುಳುಕನ್ನಡಿಗರ ಬೆಂಬಲದಿಂದ ಸಂಸ್ಥೆ ಯಶಸ್ವಿಯಾಗಿ ಬೆಳೆಯುತ್ತಿದ್ದು, ಯುವಕರ ಪಾಲ್ಗೊಳ್ಳುವಿಕೆ ವಿಶೇಷ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಿಎ ರಾಜಶ್ರೀ ಜಿ. ಶೆಟ್ಟಿ ಅವರು ತುಳು ಭಾಷೆ, ಸಂಸ್ಕೃತಿ ಉಳಿಸುವಲ್ಲಿ ತುಳುಕೂಟದ ಸೇವೆಯನ್ನು ಶ್ಲಾಘಿಸಿದರು. ಮಹಿಳಾ-ಪುರುಷ ಸಮಾನತೆ, ವಿನಯ ಮತ್ತು ಪರಸ್ಪರ ಗೌರವದ ಮಹತ್ವವನ್ನು ಒತ್ತಿ ಹೇಳಿದರು.
ಸಾಹಿತಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಅವರು ವಿಶು ಶೆಟ್ಟಿಯ ಸೇವೆಯನ್ನು ಮೆಚ್ಚಿ, ಮಹಿಳೆಯರು ತಮ್ಮ ಪ್ರತಿಭೆಯನ್ನು ಗುರುತಿಸಿಕೊಂಡು ಸಂಸ್ಕೃತಿಯನ್ನು ಉಳಿಸಬೇಕು ಎಂದರು.

ಯೋಗಗುರು ಸುಮತಿ ಒಮಯ್ಯ ಪೂಜಾರಿ ಅವರು ಮಹಿಳೆಯರು ಆರೋಗ್ಯ ಕಾಪಾಡಿಕೊಳ್ಳಲು ಯೋಗದ ಅಗತ್ಯತೆಯನ್ನು ವಿವರಿಸಿದರು.
ಅತಿಥಿ ಸುಜಾತಾ ಶೆಟ್ಟಿ ಅವರು ಸಂಸ್ಥೆ ಮಕ್ಕಳಿಗೆ ಭಾಷೆ, ಕಲೆ ಹಾಗೂ ವ್ಯಕ್ತಿತ್ವಾಭಿವೃದ್ಧಿಗೆ ಕೊಡುಗೆ ನೀಡುತ್ತಿದೆ ಎಂದು ಹೇಳಿದರು. ಸರ್ಕಾರದ ಯೋಜನೆಗಳ ಸದುಪಯೋಗ ಪಡೆಯುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮಕ್ಕಳನ್ನು ಗೌರವಿಸಲಾಯಿತು. ಯಶೋಧಾ ಕೋಟ್ಯಾನ್ ಸ್ವಾಗತಿಸಿ ಎಲ್ಲರ ಸಹಕಾರಕ್ಕೆ ಧನ್ಯವಾದ ತಿಳಿಸಿದರು. ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೊನೆಯಲ್ಲಿ ‘ಶ್ರೀ ಕೃಷ್ಣ ಕಲಾವಿದರು ಉಡುಪಿ’ ತಂಡದಿಂದ ತುಳು ನಾಟಕ ‘ಅನಿದಾ ಮನದಾನಿ’ ಪ್ರದರ್ಶನಗೊಂಡಿತು. ಅಪಾರ ಸಂಖ್ಯೆಯಲ್ಲಿ ತುಳು ಕನ್ನಡಿಗರು ಭಾಗವಹಿಸಿದರು.
ಪ್ರಶಸ್ತಿ ಸ್ವೀಕರಿಸಿದ ವಿಶು ಶೆಟ್ಟಿ, ಅಹಂಕಾರ ಬಿಟ್ಟು ನಿಷ್ಠೆಯಿಂದ ಸಮಾಜಸೇವೆ ಮಾಡಬೇಕು. ಮಕ್ಕಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರ ಅಗತ್ಯ ಎಂದು ಸಂದೇಶ ನೀಡಿದರು.

