ಧಾರವಾಡ : ಬದುಕಿನ ಆದರ್ಶದ ಮೌಲ್ಯಗಳ ನೆರಳಿನಲ್ಲಿ ಮೊದಲು ಮಾನವನಾಗಲು ರೂಢಿಸಿಕೊಂಡು ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿ ಎಲ್ಲರಿಗೂ ಸ್ಮರಣೀಯವಾಗುವ ಸಾರ್ಥಕ ಜೀವನದಿಂದ ಸಾಕ್ಷಾತ್ಕಾರ ಹೊಂದಲು ಪ್ರಯತ್ನಿಸಬೇಕೆಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ನುಡಿದರು.

ಅವರು ಹತ್ತಿರದ ತಾಲೂಕಿನ ಅಮ್ಮಿನಬಾವಿ ಗ್ರಾಮದ ಸಂಸ್ಥಾನ ಪಂಚಗೃಹ ಹಿರೇಮಠದ ಕರ್ತೃ ಶ್ರೀಗುರುಶಾಂತಲಿಂಗ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಧರ್ಮ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಆಯುಷ್ಯದ ಪ್ರತೀ ಕ್ಷಣಗಳ ಕುರಿತು ಆಲೋಚನೆ ಇರಬೇಕು. ಕೊನೆಯ ಅವಸ್ಥೆಯಾದ ಈ ಮನುಷ್ಯ ಜನ್ಮ ವ್ಯರ್ಥವಾಗಿ ಎಲ್ಲೋ ಕಳೆದು ಹೋಗದಂತೆ ಎಚ್ಚರಿಕೆಯ ತಿಳಿವಳಿಕೆಯನ್ನು ಹೊಂದಿ, ಇಹದ ಬದುಕು ಅರ್ಥಪೂರ್ಣವಾಗಿದ್ದು ಮೋಕ್ಷದ ಮಾರ್ಗದತ್ತ ಹೆಜ್ಜೆಹಾಕಲು ಗುರುಬೆಳಕಿನ ಮಾರ್ಗದರ್ಶನ ಪಡೆಯಬೇಕು ಎಂದರು.

ದೇಶಕ್ಕಾಗಿ-ಧರ್ಮಕ್ಕಾಗಿ : ಭಾರತೀಯರು ಭಗವಂತನೊಂದಿಗೆ ಭಕ್ತಿಯ ಅನುಸಂಧಾನಗೈಯುವ ಚಿಂತನೆ ವಿಶ್ವವ್ಯಾಪಕವಾದದ್ದು. ಭಾರತೀಯ ಸನಾತನ ಸಂಸ್ಕೃತಿಯ ಘನ ಪರಂಪರೆಯನ್ನು ತೆರೆದ ಹೃದಯದಿಂದ ಅವಲೋಕನಗೈದು ದೇಶವಾಸಿಗಳೆಲ್ಲರೂ ಮೊದಲು ದೇಶಕ್ಕಾಗಿ, ನಂತರ ಧರ್ಮ-ಸಂಸ್ಕೃತಿ ಸಂರಕ್ಷಣೆಗಾಗಿ ಕೈಜೋಡಿಸಿ ಶ್ರಮಿಸುವುದನ್ನು ರೂಢಿಸಿಕೊಳ್ಳಬೇಕು. ಅತ್ಯಂತ ಸೀಮಿತ ದೃಷ್ಟಿಕೋನದಿಂದ ಧರ್ಮದ ವಿಶ್ಲೇಷಣೆಯನ್ನು ಕುಬ್ಜಗೊಳಿಸದೇ ವಿಶಾಲ ವ್ಯಾಪ್ತಿಯಲ್ಲಿ ಧರ್ಮವನ್ನು ಅರಿತಾಗ ಯಾವ ದ್ವಂದ್ವ-ವೈರುಧ್ಯಗಳಿಗೂ ಅವಕಾಶ ಇರುವದಿಲ್ಲ. ಧರ್ಮ ಉಳಿದಾಗ ಮಾತ್ರ ಮಾನವ ಕುಲ ಉಳಿದು ಬೆಳೆದು ಬಲಗೊಳ್ಳಲು ಸಾಧ್ಯವಾಗುತ್ತದೆ ಎಂದೂ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.


ಶಿರಕೋಳ ಹಿರೇಮಠದ ಶ್ರೀಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೆಳಗಾವಿ ಜಿಲ್ಲೆ ಇನಾಂಹೊಂಗಲ ವಿರಕ್ತಮಠದ ಶ್ರೀಅಭಿನವ ಸಿದ್ಧಲಿಂಗ ಸ್ವಾಮೀಜಿ, ಸುಳ್ಳದ ಪಂಚಗೃಹ ಹಿರೇಮಠದ ಶ್ರೀಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಉಪದೇಶಾಮೃತ ನೀಡಿದರು. ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆವಹಿಸಿದ್ದರು.

ಮುಖ್ಯ ಅತಿಥಿಗಳಾಗಿದ್ದ ಉದ್ಯಮಿ, ಸಮಾಜಸೇವಕ ಮಂಜುನಾಥ ಮಕ್ಕಳಗೇರಿ ಹಾಗೂ ಧಾರವಾಡ ಜಿ.ಪಂ. ಮಾಜಿ ಉಪಾಧ್ಯಕ್ಷ ನಿಜನಗೌಡ ಪಾಟೀಲ ಮಾತನಾಡಿ, ಜನಮನಕ್ಕೆ ಧರ್ಮದ ಮತ್ತು ಧರ್ಮಗುರುಗಳ ಮಾರ್ಗದರ್ಶನ ಲಭಿಸಿದಾಗ ಆಧ್ಯಾತ್ಮದ ಅನುಪಾಲನೆಯಲ್ಲಿ ಜನವಿರೋಧಿ ಕೃತ್ಯಗಳು ಕಡಿಮೆಯಾಗಿ ಬದುಕಿನ ದಾರಿ ಸುಗಮವಾಗುತ್ತದೆ ಎಂದರು.

ಗುರುರಕ್ಷೆ ಗೌರವ : ವಿಜಯನಗರ ಜಿಲ್ಲೆ ಹಂಪಸಾಗರ ನವಲಿಹಿರೇಮಠದ ಶ್ರೀಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಗದಗ ಜಿಲ್ಲೆ ನರೇಗಲ್ಲ ಹಿರೇಮಠದ ಶ್ರೀಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಬೆಳಗಾವಿ ಜಿಲ್ಲೆ ಸತ್ತಿಗೇರಿ ಹಿರೇಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಎಲುಬು-ಕೀಲು ತಜ್ಞ ಡಾ. ಶ್ರೀಕಂಠ ರಾಮನಗೌಡರ, ಮಂಜುನಾಥ ಮಕ್ಕಳಗೇರಿ, ನಿಜನಗೌಡ ಪಾಟೀಲ, ಸಂಗೀತ ಕಲಾವಿದರಾದ ವೀರೇಶಕುಮಾರ ಮಳಲಿ ಹಾಗೂ ಮಲ್ಲಿಕಾರ್ಜುನ ಕೆರಕನಹಳ್ಳಿ ಅವರಿಗೆ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳು ಗುರುರಕ್ಷೆಯ ಗೌರವ ನೀಡಿ ಆಶೀರ್ವದಿಸಿದರು. ಲೇಖಕ ಗುರುಮೂರ್ತಿ ಯರಗಂಬಳಿಮಠ ಸ್ವಾಗತಿಸಿದರು. ಸೋಮಲಿಂಗಶಾಸ್ತ್ರಿ ಗುಡ್ಡದಮಠ ವಂದಿಸಿದರು. ಅಮ್ಮಿನಬಾವಿ, ಮರೇವಾಡ, ತಿಮ್ಮಾಪೂರ, ಕರಡಿಗುಡ್ಡ, ಕವಲಗೇರಿ, ಚಂದನಮಟ್ಟಿ ಹಾಗೂ ಧಾರವಾಡ ನಗರದ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

