ಮಂಗಳೂರು : ಒಳಮೀಸಲಾತಿ ರೋಸ್ಟರ್ ಹಂಚಿಕೆ ವಿರೋಧಿಸಿ ಬೆಂಗಳೂರಿನ ಸ್ವಾತಂತ್ರೃ ಉದ್ಯಾನದಲ್ಲಿ ಮಾ.24ರಂದು ಬೆಳಗ್ಗೆ 10ಕ್ಕೆ ಬೃಹತ್ ಪ್ರತಿಭಟನಾ ಸಮಾವೇಶ ಕೈಗೊಂಡಿದ್ದು ಇದರಲ್ಲಿ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮತ್ತು ಬಂಜಾರ, ಭೋವಿ, ಕೊರಮ, ಕೊರಚ, ಚರ್ಮಕಾರ, ಸೂಕ್ಷ್ಮ ಪರಿಶಿಷ್ಟ ಜಾತಿಗಳ ಸಮುದಾಯದವರು ಭಾಗವಹಿಸಲಿದ್ದಾರೆ ಎಂದು ಭೋವಿ ಸಮಾಜದ ಯುವ ಮುಖಂಡರಾದ ಪವನ್ ಕುಮಾರ್ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಅವೈಜ್ಞಾನಿಕ ಒಳಮೀಸಲಾತಿ ಹಾಗೂ ರೋಸ್ಟರ್ ಪದ್ಧತಿ ಜಾರಿ ಮಾಡಿದ್ದು, ಇದು ಎಸ್ಸಿ ಒಳಮೀಸಲಾತಿ ವರ್ಗೀಕರಣದಲ್ಲಿ ಸಿ-ಪ್ರವರ್ಗ ದಲ್ಲಿರುವ ಬಂಜಾರ, ಭೋವಿ, ಕೊರಚ, ಕೊರಮ, ಆದಿಯಾ, ಅಗೇರ ಸೇರಿದಂತೆ 63 ಜಾತಿಗಳಿಗೆ ಮಾರಕವಾಗಿದೆ ಎಂದರು.

ಪರಿಶಿಷ್ಟ ಜಾತಿಯ ಒಳಮೀಸಲಾತಿಗೆ ಸಂಬಂಧಿಸಿ ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿನ ದತ್ತಾಂಶ ಪೂರ್ವಾಗ್ರಹ ಪೀಡಿತವಾಗಿದೆ. ಸೋರಿಕೆಯಾಗಿರುವ ವರದಿಯ ಅಂಶಗಳ ಅಪೂರ್ಣ, ಅವೈಜ್ಞಾನಿಕ, ಅಸ್ಪಷ್ಟ ಹಾಗೂ ನ್ಯಾಯಸಮ್ಮತವಲ್ಲದ ಶಿಫಾರಸುಗಳನ್ನು ಒಳಗೊಂಡಿದೆ. ಕಳೆದ 50 ವರ್ಷಗಳಿಂದ 101 ಸಮುದಾಯಗಳ ಸ್ಥಿತಿಗತಿಗಳ ಮಾಹಿತಿ ಪಡೆದು ಸಮೀಕ್ಷೆಯ ಸಮಗ್ರ ದತ್ತಾಂಶಗಳನ್ನು ಬಿಡುಗಡೆ ಮಾಡಬೇಕು, ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳಿಂದ ಆಕ್ಷೇಪಣೆ ಸ್ವೀಕರಿಸಲು ಕಾಲಾವಕಾಶ ನೀಡಬೇಕು ಎಂದವರು ಒತ್ತಾಯಿಸಿದರು.
ವರದಿಯಲ್ಲಿ ಛಲವಾದಿ, ಬಂಜಾರ, ಭೋವಿ, ಕೊರಮ, ಕೊರಚ, ಚರ್ಮಕಾರ, ಸಮಗಾರ ಸಹಿತ ಕೆಲವು ಸಮುದಾಯಗಳಿಗೆ ಅನ್ಯಾಯವಾಗಿದೆ. ಸರಕಾರ ಹೊಸ ಆಯೋಗ ರಚಿಸಿ ಅನ್ಯಾಯ ಸರಿಪಡಿಸಬೇಕು, ಎಲ್ಲ ಸಮುದಾಯದ ಮುಖಂಡರ ಸಭೆ ನಡೆಸಬೇಕು ಎಂಬ ಬೇಡಿಕೆಗೆ ಸ್ಪಂದಿಸದಿರುವ ಕಾರಣ ಪ್ರತಿಭಟನೆ ಆಯೋಜಿಸಲಾಗಿದೆ ಎಂದರು.

