ಧಾರವಾಡ : ವಿಭಿನ್ನ ಧರ್ಮ ಪೀಠಗಳು ಹಾಗೂ ಮಠ-ಮಂದಿರಗಳ ಮೂಲಕ ನಾಡಿನಾಧ್ಯಂತ ಜರುಗುವ ಜಾತ್ರೆಗಳ ಹಿಂದೆ ಧರ್ಮ, ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸುವ ಉದಾತ್ತ ಉದ್ದೇಶವಿದೆ ಎಂದು ನಗರದ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಅವರು ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕರ್ತೃ ಶ್ರೀಗುರುಶಾಂತಲಿ0ಗ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ರವಿವಾರ ಹಮ್ಮಿಕೊಂಡಿದ್ದ ಧರ್ಮ ಸಂಗಮ ಸಮಾವೇಶದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಮಾನವ ಕುಲವು ಧರ್ಮ, ಸಂಸ್ಕೃತಿ, ಸಂಸ್ಕಾರಗಳ ನೆಲೆಯಲ್ಲಿ ಬದುಕಲು ಕಲಿತಾಗ ನಿತ್ಯದ ದಿನಚರಿಯ ಕ್ಷಣಗಳು ಸಂತಸ, ಸಂತೃಪ್ತಿ, ಸಮಾಧಾನದಿಂದ ಕೂಡಿರುತ್ತವೆ ಎಂದರು.

ಹಾಸನ ಜಿಲ್ಲೆಯ ನೊಣವಿನಕೆರೆ ಶ್ರೀಸೋಮೇಕಟ್ಟೆ ಕಾಡಸಿದ್ಧೇಶ್ವರಮಠದ ಶ್ರೀಅಭಿನವ ಕಾಡಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಯುದ್ಧಗಳಿಂದಾಗಿ ಇಂದು ವಿಶ್ವದ ವಿವಿಧ ರಾಷ್ಟçಗಳಲ್ಲಿ ಅಶಾಂತಿ ನೆಲೆಸಿದೆ. ಅಲ್ಲಿಯ ಜನಮನಗಳು ತಲ್ಲಣಗೊಂಡಿವೆ. ಆದರೆ ಆಧ್ಯಾತ್ಮದ ತವರುಮನೆ ಭಾರತದಲ್ಲಿ ಸದಾಕಾಲವೂ ಶಾಂತಿ, ಸಮಾಧಾನ, ಸಮೃದ್ಧಿ ನೆಲೆಸಲು ಇಲ್ಲಿ ಅವತಾರ ತಾಳಿರುವ ಅನೇಕ ಆಚಾರ್ಯರ, ಶಿವಯೋಗಿಗಳ, ಸಂತರ, ಶರಣರ ತಪೋಶಕ್ತಿಯೇ ಕಾರಣವಾಗಿದೆ ಎಂದರು.
ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿ0ಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಮಷ್ಟಿ ಭಾವವನ್ನೇ ಕೇಂದ್ರೀಕರಿಸಿರುವ ದಾಸೋಹದ ಗುಣಗಳಾದ ಹಂಚಿ ತಿನ್ನುವ ವಿಚಾರಗಳನ್ನು ವ್ಯಾಪಕಗೊಳಿಸಿ ಸಾಮಾಜಿಕ ಒಳಿತನ್ನು ಜೊತೆಗೆ ಆಧ್ಯಾತ್ಮಿಕ ಪ್ರಗತಿಯನ್ನೂ ಸಾಧಿಸಬೇಕೆನ್ನುವುದು ಜಾತ್ರೆಗಳ ಹಿಂದಿನ ಬಹುಮುಖ್ಯ ಉದ್ದೇಶವಾಗಿದೆ ಎಂದರು.

ಕಲಬುರ್ಗಿ ಜಿಲ್ಲೆ ಬೆಳಗುಂಪಾ ಬೃಹನ್ಮಠದ ಶ್ರೀಅಭಿನವ ಪರ್ವತೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಸವದತ್ತಿ ಮೂಲಿಮಠದ ಶ್ರೀಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಉಪದೇಶಾಮೃತ ನೀಡಿದರು. ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿ0ಗ ಶಿವಾಚಾರ್ಯ ಸ್ವಾಮೀಜಿ ಸಮಾವೇಶದ ಸಾನ್ನಿಧ್ಯವಹಿಸಿದ್ದರು. ಹಾಸನ ಜಿಲ್ಲೆ ಹೆಗ್ಗಡಹಳ್ಳಿಮಠದ ಶ್ರೀಷಡ್ಭಾವರಹಿತೇಶ್ವರ ಶಿವಾಚಾರ್ಯ ಸ್ವಾಮೀಜಿ, ಮೊರಬ ಜಡಿಮಠದ ಶ್ರೀಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಳೇಹುಬ್ಬಳ್ಳಿ-ಹಳ್ಯಾಳ ಪಂಚಗೃಹ ಹಿರೇಮಠದ ನಿಯೋಜಿತ ಪಟ್ಟಾಧ್ಯಕ್ಷರಾದ ಶ್ರೀರೇಣುಕಪ್ರಸಾದ ದೇವರು ಇದ್ದರು.

ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ, ಯುವ ಕಾಂಗ್ರೆಸ್ ಮುಖಂಡ ಈಶ್ವರ ಶಿವಳ್ಳಿ, ಗ್ರಾ.ಪಂ. ಮಾಜಿ ಸದಸ್ಯ ಬಸವರಾಜ ಇದ್ಲಿ, ಹುಸೇನಕಾನ್ ಹುಬ್ಬಳ್ಳಿ, ಗಾಯಕ ಜಗದೀಶ, ತಬಲಾ ಕಲಾವಿದ ಮಲ್ಲಿಕಾರ್ಜುನ ಕೆರಕನಹಳ್ಳಿ ಅವರನ್ನು ಗೌರವಿಸಿ ಶ್ರೀಗಳು ಆಶೀರ್ವದಿಸಿದರು. ಲೇಖಕ ಗುರುಮೂರ್ತಿ ಯರಗಂಬಳಿಮಠ ಸ್ವಾಗತಿಸಿದರು. ಸೋಮಲಿಂಗಶಾಸ್ತಿç ಗುಡ್ಡದಮಠ ವಂದಿಸಿದರು.
ಪುರಾಣ ಮಂಗಲ : ಮಾರ್ಚ-8 ರಿಂದ ನಡೆದಿದ್ದ ಕಲಬುರ್ಗಿ ಶರಣಬಸವೇಶ್ವರರ ಪುರಾಣ ಪ್ರವಚನ ಇದೇ ಸಂದರ್ಭದಲ್ಲಿ ಮಂಗಲಗೊ0ಡಿತು. ಪ್ರವಚನ ನೀಡಿದ ಸವದತ್ತಿ ಮೂಲಿಮಠದ ಶ್ರೀಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರನ್ನು ಅಮ್ಮಿನಬಾವಿ ಮಠದ ಉಭಯ ಶ್ರೀಗಳು ಗೌರವಿಸಿದರು.

