ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ 44ನೇ ವಾರ್ಷಿಕ ಘಟಿಕೋತ್ಸವವು ದಿನಾಂಕ 28ರಂದು ಮಂಗಳಗಂಗೋತ್ರಿಯ ಸಭಾಂಗಣದಲ್ಲಿ ಜರಗಲಿದ್ದು ನಾಳೆ ಪೂರ್ವಾಹ್ನ 11ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಲಿದೆ.
ಈ ಬಾರಿಯ ಘಟಿಕೋತ್ಸವದಲ್ಲಿ ಅಪರೂಪದ ಸಾಧಕರಾದ ಅಕ್ಷರ ಸಂತ ಹರೇಕಳ ಹಾಜಬ್ಬ, ದೈವ ನರ್ತಕ ಡಾ.ರವೀಶ್ ಪಡುಮಲೆ, ಅವರಿಗೆ ಗೌರವ ಡಾಕ್ಟರೇಟ್ ಪ್ರದಾನಿಸಲಾಗುವುದು ಹಾಗೂ ಯಕ್ಷಗಾನದ ಹಿರಿಯ ಕಲಾವಿದ ದಿವಂಗತ ಸೂರಿಕುಮೇರು ಗೋವಿಂದ ಭಟ್ ಅವರಿಗೆ ಮರಣೋತ್ತರಾಗಿ ಎಪ್ರಿಲ್ 13 ರಂದು ಅವರ ಮನೆಗೆ ತೆರಳಿ ಪ್ರದಾನಿಸಲಾಗುವುದು, ಅವರ ಪುತ್ರ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಬಡ ಮಕ್ಕಳ ಶಿಕ್ಷಣಕ್ಕಾಗಿ ತನ್ನ ದುಡಿಮೆಯನ್ನೇ ಸಮರ್ಪಿಸಿದ ಹರೇಕಳ ಹಾಜಬ್ಬರು, ಕಿತ್ತಳೆ ಮಾರಾಟದಿಂದ ಗಳಿಸಿದ ಹಣದಲ್ಲಿ ಗ್ರಾಮದಲ್ಲಿ ಶಾಲೆ ನಿರ್ಮಿಸಿ ದೇಶದ ಗಮನ ಸೆಳೆದಿದ್ದಾರೆ. ಶಿಕ್ಷಣದ ಮಹತ್ವವನ್ನು ಅರಿತ ಅವರು, ತಮ್ಮ ಅಕ್ಷರಜ್ಞಾನ ಕೊರತೆಯನ್ನು ಲೆಕ್ಕಿಸದೇ ಬಡ ಮಕ್ಕಳ ಭವಿಷ್ಯಕ್ಕಾಗಿ ಕಾರ್ಯನಿರ್ವಹಿಸಿ, ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರ ಸೇವೆ ಇಡೀ ದೇಶದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದು, “ಅಕ್ಷರ ಸಂತ” ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಸೂರಿಕುಮೇರು ದಿವಂಗತ ಕೆ. ಗೋವಿಂದ ಭಟ್ ಅವರು ಸುಮಾರು ಏಳು ದಶಕಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಅಪಾರ ಖ್ಯಾತಿ ಗಳಿಸಿದ್ದರು. ಹಲವು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ ಅವರು, ದೇಶ-ವಿದೇಶಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿ ಕಲೆಗಾಗಿ ಅಪಾರ ಕೊಡುಗೆ ನೀಡಿದ್ದಾರೆ. ಇತ್ತೀಚೆಗೆ ಅವರು ನಿಧನ ಹೊಂದಿದ್ದು, ಕಲಾ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ.

ಪುತ್ತೂರು ತಾಲೂಕಿನ ಪಡುಮಲೆ ಗ್ರಾಮದ ಡಾ.ರವೀಶ್ ಪಡುಮಲೆ ಅವರು ಗ್ರಾಮೀಣ ಹಿನ್ನೆಲೆಯಿಂದ ಬಂದರೂ ಉನ್ನತ ಶಿಕ್ಷಣ ಪಡೆದು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಪಿಎಚ್ಡಿ ಪಡೆದ ಮೊದಲ ದೈವನರ್ತಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಉಜಿರೆಯ ಎಸ್ಡಿಎಂ ತಾಂತ್ರಿಕ ಸಂಸ್ಥೆಯಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾಜಿಕ ಸೌಹಾರ್ದತೆ, ಅಸ್ಪೃಶ್ಯತೆ ನಿವಾರಣೆ ಹಾಗೂ ತುಳು ಸಂಸ್ಕೃತಿ ಸಂರಕ್ಷಣೆಯಲ್ಲಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ.

