ಮಂಗಳೂರು: ಈಶ್ವರನ ಹೂದೋಟ ಎಂದೇ ಬಣ್ಣಿಸಲಾಗುವ ಪ್ರಶಾಂತ, ಪ್ರಕೃತಿಯ ಸೊಬಗು, ಹಸಿರು ಸಿರಿಯ ಮಧ್ಯೆ ಇರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪದ್ಯಾಣದಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮಾರ್ಚ್ 30ರಿಂದ ಏಪ್ರಿಲ್ 6 ವರೆಗೆ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿದೆ. ಏಪ್ರಿಲ್ 7ರಂದು ಕಾರ್ಯಕರ್ತರ ಸಭೆ ನಡೆಯಲಿದೆ ಎಂದು ಮಂಗಳೂರಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಹೈಕೋರ್ಟ್ ಹಿರಿಯ ನ್ಯಾಯವಾದಿ ಡಾ. ಅರುಣ ಶ್ಯಾಮ್ ಹೇಳಿದರು.
ಭಾರತದ ಏಕಾದಶ ಪುಣ್ಯ ನದಿಗಳ ತೀರ್ಥದೊಂದಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿರುವುದು ವಿಶೇಷವಾಗಿದೆ, (ಗಂಗೆ, ಯಮುನೆ, ಸರಸ್ವತಿ, ನರ್ಮದೆ, ಗಂಡಕೀ, ನಾರಾಯಣಿ, ತ್ರಿಶೂಲಿ, ಸರಯೂ, ಕಾವೇರಿ, ತುಂಗೆ, ನೇತ್ರಾವತಿ) ಈ ತೀರ್ಥದ ಭವ್ಯ ಮೆರವಣಿಗೆ ಸಂಗಮ ಕ್ಷೇತ್ರ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ, ಮಹಾಕಾಳಿ ದೇವಸ್ಥಾನದಿಂದ ಮಾರ್ಚ್ 30 ರಂದು ಚಾಲನೆಗೊಂಡು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆದು, ಹೊರೆಕಾಣಿಕೆಗಳ ಸಹಿತ ನಾಡಿನ ಸಾಧು, ಸಂತರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಪದ್ಯಾಣ ತಲುಪಲಿದೆ ಎಂದವರು ಮಾಹಿತಿ ನೀಡಿದರು.

ಪದ್ಯಾಣದ ವಿಶೇಷ
ಸಪರಿವಾರ ಶ್ರೀ ಮಹಾಲಿಂಗೇಶ್ವರ ದೇವರಲ್ಲಿ ಪ್ರಾರ್ಥಿಸಿದರೆ ವಿದ್ಯೆ, ಬುದ್ಧಿ, ಆರೋಗ್ಯ, ಉದ್ಯೋಗ, ವಿವಾಹ, ಸತ್ಸಂತಾನ ಹಾಗೂ ಕೃಷಿ ಸಮೃದ್ಧಿಗಳನ್ನು ಅನುಗ್ರಹಿಸುತ್ತಾನೆ ಎಂಬ ನಂಬಿಕೆ ಇದೆ. ಶಿವನ ಜೊತೆ ಶಕ್ತಿಯ ನೆಲೆಯಾಗಿರುವ ಹಿನ್ನೆಲೆ ಇಲ್ಲಿ ನಡೆಯುವ ಶ್ರೀಚಕ್ರಪೂಜೆ ಹಲವರಿಗೆ ಉತ್ತಮ ಫಲವನ್ನು ಒದಗಿಸಿದೆ.
ಸಂಗೀತ, ಯಕ್ಷಗಾನ, ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ ಪದ್ಯಾಣ ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ಪ್ರದೇಗಳಿಗೆ ಸೇರಿದವರು ರಾಜ್ಯ, ರಾಷ್ಟ್ರ ಖ್ಯಾತಿ ಗಳಿಸಿದ್ದಾರೆ. ಮಧ್ಯಾಹ್ನಕ್ಕೆ ಪದ್ಯಾಣ ಎಂಬುದು ಇಲ್ಲಿ ಪ್ರಚಲಿತವಿರುವ ಹಳೆಯ ಆಡುನುಡಿ. ಸ್ಥಳೀಯ ಮನೆಗಳಿಗೆ ಮಧ್ಯಾಹ್ನದ ಹೊತ್ತಿಗೆ ಯಾರೇ ಬಂದರೂ ಅವರಿಗೆ ಆತಿಥ್ಯ ನೀಡುವ ಮನೆಗಳು ಇಲ್ಲಿವೆ.

ವಿಟ್ಲದ ಅರಸು ಸೀಮೆಗೆ ಸೇರಿದ ಈ ದೇಗುಲ ಬಹಳ ಕಾಲ ಪಾಳುಬಿದ್ದಿದ್ದು, ಮುಳಿಹುಲ್ಲಿನ ಮಾಡಿನಿಂದ ಕೂಡಿತ್ತು. ಆರುನೂರು ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನವನ್ನು ಪುನರ್ ನಿರ್ಮಾಣಗೊಳಿಸಿ 1975ರಲ್ಲಿ ಅಂದಿನ ಆಡಳಿತ ಮೊಕ್ತೇಸರರಾದ ದಿ. ಸೇರಾಜೆ ನಾರಾಯಣ ಭಟ್ಟರ ನೇತೃತ್ವದಲ್ಲಿ ಊರ ಪರವೂರ ಭಕ್ತರ ಸಹಕಾರದೊಂದಿಗೆ ನವೀಕೃತ ದೇವಾಲಯದಲ್ಲಿ ಶ್ರೀಚಕ್ರ ಸಹಿತ ಶ್ರೀಮಹಾಲಿಂಗೇಶ್ವರ ಸ್ವಾಮಿಯ ಪ್ರತಿಷ್ಠೆಯಾಗಿ ಬ್ರಹ್ಮಕಲಶಾಭಿಷೇಕವಾಯಿತು.1992ನೇ ಇಸವಿಯಲ್ಲಿ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆ ಚಿಂತನೆ ನಡೆಸಿ, 1994 ರಲ್ಲಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಅಷ್ಟ ಬಂದ ಸಹಿತ ದ್ರವ್ಯಕಲಶಾಭಿಷೇಕವನ್ನು. 2006 ನೇ ಇಸವಿಯಲ್ಲಿ ನಾಗ- ಶಾಸ್ತಾರ ಪ್ರತಿಷ್ಠೆ, ಧೂಮಾವತಿ ಹಾಗೂ ಕೊರತಿ ದೈವಸ್ಥಾನದ ನವೀಕರಣ- ಬ್ರಹ್ಮಕಲಶ 2006 ಜನವರಿ 4 ರಿಂದ 11ರವರೆಗೆ ಶ್ರೀ ದೇವರ ಪುನಃ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ನಡೆದಿದೆ. ಇದೀಗ ಶ್ರೀದೇವರಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕವನ್ನು ನಡೆಸಲು ತೀರ್ಮಾನಿಸಿ,2024ರ ನವೆಂಬರ್ 20 ರಂದು ವೇದಮೂರ್ತಿ ಶ್ರೀ ಬೋಳಂತಕೋಡಿ ರಾಮ ಭಟ್ಟರ ಮೂಲಕ ತಾಂಬೂಲ ಪ್ರಶ್ನೆಯನ್ನು ಶ್ರೀ ಕ್ಷೇತ್ರದಲ್ಲಿ ಇರಿಸಲಾಯಿತು. ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕುಂಟುಕುಡೇಲು ರಘುರಾಮ ತಂತ್ರಿಗಳ ನೇತೃತ್ವ, ದೈವಜ್ಞರ ನಿರ್ದೇಶನ ಹಾಗೂ ವಾಸ್ತುಶಿಲ್ಪಿಗಳಾದ ಶ್ರೀ ಎಸ್.ಎಂ.ಪ್ರಸಾದ ಮುನಿಯಂಗಳ ಇವರ ವಾಸ್ತುಶಿಲ್ಪ ಸಲಹೆಗಳ ಪ್ರಕಾರ, ಬ್ರಹ್ಮಕಲಶೋತ್ಸವ ಕಾರ್ಯ ನಡೆಸಲು ತೀರ್ಮಾನಿಸಲಾಯಿತು ಎಂದರು.

ಕಾರ್ಯಕ್ರಮ ವೈಭವ:
2026 ರ ಮಾರ್ಚ್ 30ರಿಂದ ಎಪ್ರಿಲ್ 6 ರ ವರೆಗೆ ನಡೆಯಲಿರುವ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮಕಲಶೋತ್ಸವದಲ್ಲಿ ವೈಭವದ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ. ಮಹಾಲಿಂಗೇಶ್ವರನಿಗೆ ಪ್ರಿಯವಾದ ಭಜನೆ, ಭಕ್ತಿ ಸಂಗೀತ, ಯಕ್ಷಗಾನ ಮೇಳೈಸಲಿದೆ. ಮೇ 20ರಂದು ದೃಢಕಲಶ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಬಿಲ್ವಪತ್ರೆ ಮತ್ತು ರುದ್ರಾಕ್ಷಿಯನ್ನು ಸ್ಮರಣಿಕೆಯನ್ನಾಗಿ ನೀಡಲಾಗುವುದು. ಸ್ಮರಣಿಕೆಯನ್ನು ಅರ್ಥಪೂರ್ಣವಾಗಿಸಲು ಪ್ಲಾಸ್ಟಿಕ್ಗಳನ್ನು ಬಳಸದೆ ಬಂದ ಅತಿಥಿಗಳನ್ನು ಗೌರವಿಸಲಾಗುವುದು. ಗ್ರಾಮಗೌರವ ಎಂಬ ಪರಿಕಲ್ಪನೆಯಲ್ಲಿ ಸ್ವಯಂಸೇವಕರನ್ನು ಗೌರವಿಸಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮೊಕ್ತೇಸರ ಸೇರಾಜೆ ಸತ್ಯನಾರಾಯಣ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಸೇರಾಜೆ ಗೋಪಾಲಕೃಷ್ಣ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು, ಕಾರ್ಯದರ್ಶಿ ಕೃಷ್ಣ ಎಂ.ಆರ್. ಕಡಬ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅರವಿಂದ ಪದ್ಯಾಣ, ಕಾರ್ಯದರ್ಶಿ ಈಶಾನ್ಯ ಪದ್ಯಾಣ, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಪ್ರಣತಿ ಚೈತನ್ಯ ಪದ್ಯಾಣ, ವಿವಿಧ ಸಮಿತಿಗಳ ಪ್ರಮುಖರಾದ ವಿನೋದ್ ಶೆಟ್ಟಿ ಪಟ್ಲ, ಚೈತನ್ಯ ಪದ್ಯಾಣ ಉಪಸ್ಥಿತರಿದ್ದರು.

