ಧಾರವಾಡ : ಜೀವಾತ್ಮ ಪರಮಾತ್ಮನಾಗಲು ಅನನ್ಯವಾದ ಉತ್ಕೃಷ್ಟ ಅಲೌಕಿಕ ಗಾಢ ಚಿಂತನೆಯನ್ನು ಬೋಧಿಸುವ ‘ವೀರಶೈವ ಪಂಚಸೂತ್ರೀಯ ಪ್ರವಚನ’ ಒಂದು ಮೇರು ದಾರ್ಶನಿಕ ಕೃತಿಯಾಗಿ ಎಲ್ಲರ ಗಮನಸೆಳೆದಿದೆ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಪ್ರತಿಪಾದಿಸಿದರು.

ಅವರು ಶನಿವಾರ ನಗರದ ಚರಂತಿಮಠ ಗಾರ್ಡನ್ದಲ್ಲಿ ಹಮ್ಮಿಕೊಂಡಿದ್ದ ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ‘ವೀರಶೈವ ಪಂಚಸೂತ್ರೀಯ ಪ್ರವಚನ’ ಕೃತಿಯ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು. ವೀರಶೈವವು ಯಾವುದೋ ಒಂದು ಜಾತಿ, ವರ್ಗ, ಪಂಗಡವನ್ನು ಸೂಚಿಸದೇ ಅದು ಶಿವ-ಜೀವರ ಆಧ್ಯಾತ್ಮದ ಅನುಸಂಧಾನ ಮಾರ್ಗವಾಗಿದೆ. ಈ ಪಥದಲ್ಲಿ ಮುನ್ನಡೆಯಲು ಯಾವುದೇ ವ್ಯಕ್ತಿಯು ಶ್ರೀಗುರುವಿನಿಂದ ಇಷ್ಟಲಿಂಗ ದೀಕ್ಷೆಯನ್ನು ಸಂಪಾದಿಸಿ ಭಕ್ತಿಯ ಬದ್ಧತೆಯಲ್ಲಿ ಹೆಜ್ಜೆಹಾಕಲು ಸದಾಶಿವನ ಪ್ರಥಮ ಸೃಷ್ಟಿಯಲ್ಲಿ ಅವತರಿಸಿದ ಶ್ರೀಜಗದ್ಗುರು ಪಂಚಾಚಾರ್ಯರು 5 ಜನ ಮಹರ್ಷಿಗಳಿಗೆ ಬೋಧಿಸಿದ ವಿಶಿಷ್ಟ ತತ್ವ ಪ್ರತಿಪಾದನೆಯೇ ವೀರಶೈವ ಪಂಚಸೂತ್ರಗಳು ಎಂದರು.

ವೀರಶೈವ ಧರ್ಮ ಸಿದ್ಧಾಂತಕ್ಕೆ ಸಪ್ರಮಾಣ ಗ್ರಂಥಗಳಾಗಿರುವ ಸ್ಮತಿ, ಆಗಮ, ಶ್ರೀಸಿದ್ಧಾಂತ ಶಿಖಾಮಣಿ ಇತ್ಯಾದಿ ಅನೇಕ ಪ್ರಾಚೀನ ಗ್ರಂಥಗಳ ಆಧಾರದಲ್ಲಿ ಈ ಕೃತಿಯಲ್ಲಿ ಪಂಚಸೂತ್ರಗಳನ್ನು ವಿಸ್ತೃತವಾಗಿ ವ್ಯಾಖ್ಯಾನಿಸಲಾಗಿದೆ. ಇದರಿಂದ ಅತ್ಯಂತ ಸಾಮಾನ್ಯ ವ್ಯಕ್ತಿಯೂ ಕೂಡಾ ಪಂಚಸೂತ್ರಗಳನ್ನು ಅರ್ಥಮಾಡಿಕೊಳ್ಳಬಹುದು. ವಿವಿಧ ಮಠಾಧೀಶರು, ಉಪನ್ಯಾಸಕರು, ಪುರಾಣಿಕರು, ಪ್ರವಚನಕಾರರು ಈ ಗ್ರಂಥದ ಆಧಾರದಲ್ಲಿ ವಿಶೇಷ ಪಂಚಸೂತ್ರ ಪ್ರವಚನಗಳನ್ನು ಮಾಡಲು ಸಹಕಾರಿಯಾಗಿದೆ. ಪಂಚಸೂತ್ರೀಯ ಪ್ರವಚನ ಶಿವಾದ್ವೆತ ಸಿದ್ಧಾಂತದ ಮಹಾಕಾವ್ಯ. ವೀರಶೈವ ತತ್ವಾನುಯಾಯಿಗಳ ಪಾಲಿಗೆ ಒಂದು ಅತ್ಯಮೂಲ್ಯ ಗ್ರಂಥವಾಗಿದೆ ಎಂದೂ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಅಕ್ಕಿಆಲೂರು ಮುತ್ತಿನಕಂತಿಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶ್ರೀಜಗದ್ಗುರು ರೇಣುಕಾಚಾರ್ಯರು ‘ಶ್ರೀಸಿದ್ಧಾಂತ ಶಿಖಾಮಣಿ’ಯ ಮೂಲಕ ನಿರೂಪಿಸಿರುವ ತತ್ವಪ್ರತಿಪಾದನೆ ಕೇವಲ ವೀರಶೈವ-ಲಿಂಗಾಯತರನ್ನೇ ಕೇಂದ್ರೀಕರಿಸಿರದೇ ಸಕಲ ಜೀವಾತ್ಮರಿಗೂ ಅನ್ವಯವಾಗುತ್ತದೆ ಎಂದರು.
ಉದ್ಘಾಟನೆ :
ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಉದ್ಘಾಟಿಸಿದ ಮಾಜಿ ಶಾಸಕ ಅಮೃತ ದೇಸಾಯಿ, ಭಾರತವಿಂದು ವಿಶ್ವಗುರು ಪಟ್ಟವನ್ನು ಅಲಂಕರಿಸಿದೆ. ಇದಕ್ಕೆ ಕಾರಣ ನಮ್ಮ ನೆಲದ ಆಧ್ಯಾತ್ಮಿಕ ಶ್ರೀಮಂತಿಕೆ. ಮೊದಲಿನಿಂದಲೂ ವೀರಶೈವ ಪಂಚಪೀಠಗಳ ಎಲ್ಲಾ ಜಗದ್ಗುರುಗಳು ಧರ್ಮವನ್ನು ಜಾಗೃತಗೊಳಿಸಿ ಅದನ್ನು ಉಳಿಸಿ-ಬೆಳೆಸಲು ನಿರಂತರ ಶ್ರಮಿಸಿತ್ತಿದ್ದಾರೆ. ಶ್ರೀಜಗದ್ಗುರು ರೇಣುಕಾಚಾರ್ಯರ ಜಯಂತಿ ಪ್ರತೀ ವರ್ಷ ನಡೆಯುವಂತಾಗಲಿ ಎಂದರು.
ಹೊಸಯಲ್ಲಾಪೂರ ಮಳೆಮಲ್ಲೇಶ್ವರ ಸಂಸ್ಥಾನ ಹಿರೇಮಠದ ಶ್ರೀಶಶಾಂಕ ದೇವರು, ಮಾಜಿ ಮೇಯರ್ ಈರೇಶ ಅಂಚಟಗೇರಿ ಹಾಗೂ ಉಮಾ ಕೊರವರ ಮಾತನಾಡಿದರು. ಹಿರಿಯ ಸಂಶೋಧಕ ಹಿರಿಯ ಸಂಶೋಧಕ ಪ್ರೊ.ಆರ್.ಎಂ. ಷಡಕ್ಷರಯ್ಯ, ಪಾಲಿಕೆ ಸದಸ್ಯರುಗಳಾದ ಶಿವು ಹಿರೇಮಠ, ಶಂಕರ ಶೆಳಕೆ, ವಕೀಲ ಅರುಣ ಚರಂತಿಮಠ, ಮುಖಂಡರಾದ ಸಿ.ಎಸ್.ಪಾಟೀಲ, ಮಂಜುನಾಥ ಸಾಲಿಮಠ, ಸಮಿತಿ ಪದಾಧಿಕಾರಿಗಳಾದ ರಾಜೇಂದ್ರ ಹಿರೇಮಠ, ಈರಯ್ಯ ರಾಚಯ್ಯನವರ, ಬಸವರಾಜ ಕುರಹಟ್ಟಿಮಠ, ಚನ್ನಬಸಯ್ಯ ಬಾಲೇದಮಠ, ಮಹೇಶ ಗುರಸ್ಥಳಮಠ, ಜಗದೀಶ ಹಿರೇಮಠ ಇದ್ದರು. ಹೊಸಯಲ್ಲಾಪುರ ಹಿರೇಮಠ ಗದಗಯ್ಯ ಸ್ವಾಮೀಜಿ ಅಧ್ಯಕ್ಷತೆವಹಿಸಿದ್ದರು. ಸಮಿತಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ಹಿರೇಮಠ ಸ್ವಾಗತಿಸಿದರು.

ಕೋಟ್ :
ಯುಗಮಾನೋತ್ಸವ :
ಯುಗಾದಿ ಪ್ರತಿಪದೆಯ ದಿನವೇ ಸದಾಶಿವನು ತನ್ನ ಮೊದಲ ಸೃಷ್ಟಿಯಲ್ಲಿ ಶ್ರೀಜಗದ್ಗುರು ಪಂಚಾಚಾರ್ಯರರನ್ನು ಸೃಷ್ಟಿಸಿ ಅವರಿಗೆ ‘ಜಗದ್ಗುರುತ್ವ’ ಕರುಣಿಸಿದ್ದರಿಂದ ಪ್ರತೀ ವರ್ಷ ಯುಗಾದಿಯ ನಂತರದಲ್ಲಿ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ಭಾರತದಾದ್ಯಂತ, ಜೊತೆಗೆ ವಿಶ್ವದ ವಿವಿಧ ರಾಷ್ಟçಗಳಲ್ಲಿ ನೆಲೆಸಿರುವ ಭಕ್ತಗಣ ಶ್ರೀಜಗದ್ಗುರು ರೇಣುಕಾದಿ ಪಂಚಾಚಾರ್ಯರ ಯುಗಮಾನೋತ್ಸವವನ್ನು ವಿಧಾಯಕವಾಗಿ ಹಮ್ಮಿಕೊಳ್ಳಲು ಸರ್ವರೂ ಒಗ್ಗೂಡಿ ಶ್ರಮಿಸಬೇಕು. -ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಕಾಶಿ ಜ್ಞಾನ ಪೀಠ

