ವಿಶಾಖಪಟ್ನಂ : ಭಾರತೀಯ ನೌಕಾಪಡೆಯ ಶಿಪ್ ಡೇಗಾದಲ್ಲಿ ನಿಯೋಜಿತರಾಗಿದ್ದ ನೌಕಾಪಡೆಯ ಅಧಿಕಾರಿ ಚಿಂತಾದ ರವೀಂದ್ರ ಅವರು ತನ್ನ ಪ್ರೇಯಸಿ ಮೌನಿಕಾಳನ್ನು ಇರಿದು ಕೊಂದು, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಕೆಲವು ಭಾಗಗಳನ್ನು ಫ್ರಿಡ್ಜ್ನಲ್ಲಿಟ್ಟಿದ್ದ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ.
ಭಾರತೀಯ ನೌಕಾಪಡೆಯ ಶಿಪ್ ಡೇಗಾದಲ್ಲಿ ನಿಯೋಜಿತರಾಗಿದ್ದ 35 ವರ್ಷದ ನೌಕಾಪಡೆಯ ಅಧಿಕಾರಿ ಚಿಂತಾದ ರವೀಂದ್ರ, 2021 ರಲ್ಲಿ ಮಿಂಗಲ್ ಎಂಬ ಡೇಟಿಂಗ್ ಆ್ಯಪ್ನಲ್ಲಿ 29 ವರ್ಷದ ಮೌನಿಕಾ ಜೊತೆ ಡೇಟಿಂಗ್ ಆರಂಭಿಸಿದ್ದ. ನಂತರ ಇಬ್ಬರ ನಡುವೆ ಪ್ರಣಯ ಸಂಬಂಧ ಬೆಳೆಯಿತು, ಇಬ್ಬರೂ ಜೊತೆಯಲ್ಲಿ ವಿಶಾಖಪಟ್ಟಣದಾದ್ಯಂತ ಉದ್ಯಾನವನಗಳು ಮತ್ತು ಚಿತ್ರಮಂದಿರಗಳಂತಹ ವಿವಿಧ ಸ್ಥಳಗಳಲ್ಲಿ ಆಗಾಗ್ಗೆ ಭೇಟಿಯಾಗುತ್ತಿದ್ದರು.

ಚಿಂತಾದ ರವೀಂದ್ರ ಅವರ ಪತ್ನಿ ವಿಜಯನಗರದಲ್ಲಿರುವ ತನ್ನ ತವರು ಮನೆಗೆ ಹೋದಾಗ, ರವೀಂದ್ರ ತಮ್ಮ ಪ್ರಿಯತಮೆ ಮೌನಿಕಾ ಅವರನ್ನು ತಮ್ಮ ನಿವಾಸದಲ್ಲಿ ಸ್ವಲ್ಪ ಸಮಯ ಕಳೆಯಲು ಕರೆದರು, ಭಾನುವಾರ ಮಧ್ಯಾಹ್ನ ತನ್ನ ಪ್ರಿಯಕರ ರವೀಂದ್ರ ಜೊತೆ ಸಮಯ ಕಳೆಯಲು ಸೂಕ್ತ ಸಮಯವೆಂದು ಭಾವಿಸಿ ಮೌನಿಕಾ ರವೀಂದ್ರನ ಮನೆಗೆ ಬರಲು ನಿರ್ಧರಿಸಿದರು, ಆದರೆ ಸಂಜೆಯ ಹೊತ್ತಿಗೆ ಇಬ್ಬರ ನಡುವೆ ವಾಗ್ವಾದ ಪ್ರಾರಂಭವಾಯಿತು, ಕೋಪದಲ್ಲಿ ರವೀಂದ್ರ ಮೌನಿಕಾಳನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ, ನಂತರ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ.
ಆರಂಭಿಕ ತನಿಖೆಯ ಪ್ರಕಾರ, ರವೀಂದ್ರ ಮೌನಿಕಳ ತಲೆ, ಕಾಲುಗಳು ಮತ್ತು ಕೈಗಳನ್ನು ಮುಂಡದಿಂದ ಬೇರ್ಪಡಿಸಿದ್ದಾನೆ. ಕಾಲುಗಳು ಮತ್ತು ಸೊಂಟವನ್ನು ಟ್ರಾಲಿ ಬ್ಯಾಗ್ನಲ್ಲಿ ಪ್ಯಾಕ್ ಮಾಡಿ, ಮುಂಡವನ್ನು ಫ್ರಿಡ್ಜ್ನಲ್ಲಿಟ್ಟಿದ್ದಾನೆ, ತಲೆ ಮತ್ತು ಕೈಗಳನ್ನು ಬೇರೆ ಸ್ಥಳಕ್ಕೆ ಸಾಗಿಸಿ, ಅಲ್ಲಿ ಅವುಗಳನ್ನು ಸುಟ್ಟುಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಕೆಲವು ಭಾಗಗಳನ್ನು ಚೀಲದಲ್ಲಿ ತುಂಬಿಸಿ, ಅವುಗಳನ್ನು ವಿಲೇವಾರಿ ಮಾಡಿದ್ದಾನೆ, ನಂತರ ಪೊಲೀಸ್ ಠಾಣೆಗೆ ಹೋಗಿ ತಾನು ಮಾಡಿರುವ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.

ಮೌನಿಕಾ ತನ್ನಿಂದ 3.5 ಲಕ್ಷ ರೂ.ಗಳನ್ನು ಪಡೆದಿದ್ದಳು ಮತ್ತು ತನ್ನ ಹೆಂಡತಿಗೆ ತಮ್ಮ ಸಂಬಂಧವನ್ನು ಬಹಿರಂಗಪಡಿಸುವುದಾಗಿ ಆಗಾಗ ಬೆದರಿಕೆ ಹಾಕುತ್ತಿದ್ದಳು. ಮೌನಿಕಾ ಹತ್ಯೆಯಾದ ದಿನದಂದು ನಡೆದ ಜಗಳ ಸೇರಿದಂತೆ ಇಬ್ಬರ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು ಎಂದು ರವೀಂದ್ರ ಪೋಲಿಸರಿಗೆ ಹೇಳಿದ್ದಾನೆ.
ಪೊಲೀಸರು ಅಪರಾಧ ಸ್ಥಳಕ್ಕೆ ತೆರಳಿದಾಗ ರೆಫ್ರಿಜರೇಟರ್ ಮತ್ತು ಮನೆಯೊಳಗೆ ಕತ್ತರಿಸಿದ ದೇಹದ ಭಾಗಗಳು ಕಂಡುಬಂದವು, ಮೌನಿಕಾಳ ತಲೆ ಕಾಣೆಯಾಗಿತ್ತು. ರವೀಂದ್ರ ಅದನ್ನು ಬೇರೆ ಸ್ಥಳದಲ್ಲಿ ವಿಲೇವಾರಿ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಕಾಣೆಯಾದ ದೇಹದ ಭಾಗಗಳನ್ನು ಹುಡುಕಲು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ. ಕೊಲೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

