ಕರ್ಜಗಿ(ತಾ.ಹಾವೇರಿ) : ದ್ವೈತ ಸಿದ್ಧಾಂತದಲ್ಲಿ ಪರಮಾತ್ಮ ಮತ್ತು ಜೀವಾತ್ಮರ ಮಧ್ಯ ಮುಖ್ಯ ಪ್ರಾಣದೇವರು ಮೋಕ್ಷದ ಸೇತುವೆಯಾಗಿದ್ದಾರೆ ಎಂದು ಉಡುಪಿ ಪೇಜಾವರ ಅಧೋಕ್ಷಜಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳು ಹೇಳಿದರು.

ಅವರು ಹಾವೇರಿ ತಾಲೂಕು ಕರ್ಜಗಿ ರೈಲು ನಿಲ್ದಾಣದ ಪಕ್ಕದಲ್ಲಿರುವ ಶ್ರೀಗುರುರಾಘವೇಂದ್ರ ರಾಯರಮಠದ ಬೃಂದಾವನದ ಹಿಂಭಾಗದಲ್ಲಿ ಇತ್ತೀಚೆಗೆ ಮುಖ್ಯ ಪ್ರಾಣದೇವರ ವಿಗ್ರಹದ ಪುನರ್ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿ ಅನುಗ್ರಹ ಸಂದೇಶ ನೀಡಿದರು. ದೇಹಕ್ಕೆ ಪ್ರಾಣಶಕ್ತಿ ಒದಗಿಸುವ ಮುಖ್ಯ ಪ್ರಾಣದೇವರು ಎಲ್ಲಾ ಇಂದ್ರಿಯಗಳ ನಿಯಂತ್ರಣ ಶಕ್ತಿ ಸಂಚಯವನ್ನೂ ಹೊಂದಿದ್ದಾರೆ. ಅಜ್ಞಾನವನ್ನು ದೂರಮಾಡಿ, ಭಕ್ತರೆಲ್ಲರನ್ನೂ ಸತ್ಯದ ಮಾರ್ಗದಲ್ಲಿ ಮುನ್ನಡೆಸಿ ಆತ್ಮಜ್ಞಾನದ ರಹದಾರಿಗೆ ಬೆಳಕು ತುಂಬುವ ವಿಶಿಷ್ಟ ಅವತಾರವೇ ಮುಖ್ಯ ಪ್ರಾಣದೇವರು ಎಂದೂ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳು ಬಣ್ಣಿಸಿದರು.

ನಿರಂತರ ಹೋಮ : ಮುಖ್ಯ ಪ್ರಾಣದೇವರ ಪುನರ್ ಪ್ರಾಣಪ್ರತಿಷ್ಠಾಪನೆಯ ಅಂಗವಾಗಿ 3 ದಿನಗಳ ಕಾಲ ಸಪ್ತ ಶುದ್ಧಿ ವಾಸ್ತು ಹೋಮ, ರಾಕ್ಷೋಘ್ನ ಹೋಮ, ಗಣ ಹೋಮ, ವಿಷ್ಣುಗಾಯತ್ರಿ ಮಂತ್ರ ಹೋಮ, ಪವಮಾನ ಹೋಮ, ನವಗ್ರಹ ಶಾಂತಿ ಹೋಮ, ಚಕ್ರಾಬ್ಜ ಮಂಡಲ ಪೂಜೆ, ಪ್ರಾಣದೇವರ ಅಧಿವಾಸ, ಪ್ರತಿಷ್ಠಾಪನ ಪ್ರಧಾನ ಹೋಮ, ಪಂಚವಿಂಶತಿಕಲಶಾರಾಧನೆ, ವಾಯುಸ್ತುತಿ ಪುನಶ್ಚರಣ ಹೋಮ, ಬ್ರಹ್ಮಕಲಶಾಭಿಷೇಕ ಹಾಗೂ ಪ್ರಾಣ ಪ್ರತಿಷ್ಠಾಪನೆ ಸೇರಿದಂತೆ ಅನೇಕ ಧಾರ್ಮಿಕ ಕೈಂಕರ್ಯಗಳು ಜರುಗಿದವು. ಅಲಂಕಾರ ಪೂಜೆಯ ನಂತರ ಉಡುಪಿ ಪೇಜಾವರ ಅಧೋಕ್ಷಜಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳು ಮಹಾಮಂಗಳಾರತಿಯ ವಿಶೇಷ ಪೂಜೆ ನೆರವೇರಿಸಿ ಮಂತ್ರಾಕ್ಷತೆ ಸಿಂಚನಗೈದರು.


ಉದ್ಘಾಟನೆ : ಇದೇ ಸಂದರ್ಭದಲ್ಲಿ ಶ್ರೀಮಠದ ಹರಿವಿಠ್ಠಲ ಆಶ್ರಮದಲ್ಲಿ ರೂಪುಗೊಂಡಿರುವ ‘ಶ್ರೀವಿಶ್ವೇಶತೀರ್ಥ ಗುರುಕುಲ’ವನ್ನು ಪೇಜಾವರಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳು ಉದ್ಘಾಟಿಸಿದರು. ಗೋಪಾಲಕೃಷ್ಣರಾವ್, ಮಲ್ಲಿಕಾ ಆಚಾರ್ಯ, ಸೋನು ಆಚಾರ್ಯ, ಪದ್ಮರಾಜ ಆಚಾರ್ಯ, ವಿಶ್ವನಾಥ ಹೆಬ್ಬಾರ, ಸುಮತಿ ಸೇರಿದಂತೆ ಶ್ರೀಗುರುರಾಘವೇಂದ್ರ ರಾಯರಮಠದ ಹಾಗೂ ಶ್ರೀಮಠದ ಹರಿವಿಠ್ಠಲ ಆಶ್ರಮದ ಅನೇಕ ಸೇವಾಕರ್ತರು ಇದ್ದರು.

