ನವದೆಹಲಿ : ಭಾರತೀಯ ಚಿತ್ರಕಲಾ ಪ್ರಪಂಚಕ್ಕೆ ಅಮೂಲ್ಯ ಕೊಡುಗೆ ನೀಡಿದ ದಂತಕತೆ ರಾಜಾ ರವಿವರ್ಮ ಅವರ ಕುಂಚದಿಂದ ರಚಿತವಾದ ‘ಯಶೋದಾ ಮತ್ತು ಕೃಷ್ಣ ಎಂಬ ತೈಲಚಿತ್ರವು ಇತ್ತೀಚೆಗೆ ಮುಂಬೈನಲ್ಲಿ ನಡೆದ ಹರಾಜಿನಲ್ಲಿ ಅದ್ಭುತ ದಾಖಲೆ ಬರೆದಿದೆ. ಈ ಅಮೂಲ್ಯ ಕಲಾಕೃತಿಯನ್ನು ಬರೋಬ್ಬರಿ 167.2 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ. ಇದು ಭಾರತೀಯ ಕಲಾ ಇತಿಹಾಸದಲ್ಲೇ ಒಂದು ಕಲಾಕೃತಿಗೆ ಸಂದ ಅತ್ಯಾಧಿಕ ಬೆಲೆಯಾಗಿದೆ.

ಹರಾಜಿನ ಸಮಯದಲ್ಲಿ ಹಲವಾರು ಕಲಾ ಸಂಗ್ರಾಹಕರು ಮತ್ತು ಉದ್ಯಮಿಗಳ ಮಧ್ಯೆ ತೀವ್ರ ಪೈಪೋಟಿ ನಡೆಯಿತು. ಕೊನೆಗೆ ಪ್ರಸಿದ್ಧ ಉದ್ಯಮಿ, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಂಸ್ಥಾಪಕ ಸೈರಸ್ ಪೂನಾವಾಲಾ ಅವರು ಈ ಅದ್ಭುತ ಕಲಾಕೃತಿಯನ್ನು ತಮ್ಮದಾಗಿಸಿಕೊಂಡರು.167 ಕೋಟಿ ರೂ. ಪಾವತಿಸಿ ಅವರು ಈ ಚಿತ್ರವನ್ನು ಖರೀದಿಸಿದ್ದಾರೆ.

ಚಿತ್ರವನ್ನು ಖರೀದಿಸಿದ ಬಳಿಕ ಸೈರಸ್ ಪೂನಾವಾಲಾ ಮಾತನಾಡಿ, “ಇದನ್ನು ಖರೀದಿಸುವುದು ಕೇವಲ ಹಕ್ಕಲ್ಲ, ಅದೊಂದು ಜವಾಬ್ದಾರಿ ಕೂಡ. ರಾಜಾ ರವಿವರ್ಮರ ಈ ಕಲಾಕೃತಿಯು ಕೇವಲ ಒಂದು ಚಿತ್ರವಲ್ಲ, ಅದೊಂದು ರಾಷ್ಟ್ರೀಯ ಸಂಪತ್ತು. ಇದನ್ನು ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗುವಂತೆ ಮಾಡಬೇಕೆಂಬುದು ನನ್ನ ಆಶಯ. ಸಾಮಾನ್ಯ ಜನರೂ ಈ ಮಹಾನ್ ಕಲಾಕೃತಿಯನ್ನು ಕಣ್ತುಂಬಿಕೊಳ್ಳಬೇಕು. ನನ್ನ ಕೈಲಾದಷ್ಟು ಪ್ರಯತ್ನಗಳನ್ನು ನಾನು ಮಾಡುತ್ತೇನೆ” ಎಂದು ತಿಳಿಸಿದ್ದಾರೆ.

1848ರಲ್ಲಿ ತಿರುವಾಂಕೂರು ರಾಜಪ್ರಭುತ್ವದ ಶ್ರೀಮಂತ ಕುಟುಂಬದಲ್ಲಿ ಜನಿಸಿದ ರಾಜಾ ರವಿವರ್ಮ, ಭಾರತೀಯ ಚಿತ್ರಕಲೆಯಲ್ಲಿ ಯುರೋಪಿಯನ್ ತೈಲವರ್ಣ ತಂತ್ರವನ್ನು ಬಳಸಿ ಚಿತ್ರಕಲೆ ರಚಿಸುತ್ತಿದ್ದರು. ಇವರ ಕುಂಚದಲ್ಲಿ ಹಿಂದೂ ಪುರಾಣಗಳ ಕಥೆಗಳು, ರಾಮಾಯಣ- ಮಹಾಭಾರತದ ಪಾತ್ರಗಳು ಮತ್ತು ದೈವಿಕ ಭಾವನೆಗಳು ಅತ್ಯಂತ ಸಜೀವವಾಗಿ ಮೂಡಿಬರುತ್ತಿದ್ದವು. ರವಿವರ್ಮ ಅವರು ಭಾರತೀಯ ಕಲೆಗೆ ಆಧುನಿಕ ಸ್ಪರ್ಶ ನೀಡಿದ ಕೀರ್ತಿಗೆ ಪಾತ್ರರಾಗಿದ್ದಾರೆ.

