ಮಂಗಳೂರು : ಗ್ಯಾಸ್ ವಿತರಣೆಯಲ್ಲಿ ಉದ್ದೇಶಪೂರ್ವಕ ವಿಳಂಬ ಮಾಡಿ ಏಜನ್ಸಿಗಳು ಅಕ್ರಮ ದಂಧೆಯಲ್ಲಿ ತೊಡಗಿರುವುದಾಗಿ ಆರೋಪಿಸಲಾಗಿದೆ. ಅಮೇರಿಕಾ–ಇರಾನ್ ಯುದ್ಧ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಗ್ಯಾಸ್ ಮಾಫಿಯಾ ಸಕ್ರಿಯವಾಗಿದ್ದು, ಇದನ್ನು ನಿಯಂತ್ರಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ವಿಫಲವಾಗಿದೆ ಎಂದು ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ಬಿ.ಕೆ. ಇಮ್ತಿಯಾಝ್ ಆಕ್ರೋಶ ವ್ಯಕ್ತಪಡಿಸಿದರು.
ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯಿಂದ ಸಮರ್ಪಕ ಗ್ಯಾಸ್ ವಿತರಣೆಗಾಗಿ ಒತ್ತಾಯಿಸಿ ಮಂಗಳವಾರ ನಗರದ ಮಿನಿ ವಿಧಾನಸೌಧದ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗ್ಯಾಸ್ ಕೊರತೆ ಉಂಟಾಗಿದ್ದರೂ ಮಂಗಳೂರಿನ ಎಚ್ಪಿಸಿಎಲ್ ಗ್ಯಾಸ್ ಸ್ಥಾವರಗಳಿಂದ ಪ್ರತಿದಿನ ಸುಮಾರು 300ಕ್ಕೂ ಹೆಚ್ಚು ಬುಲೆಟ್ ಟ್ಯಾಂಕರ್ಗಳಲ್ಲಿ ಗ್ಯಾಸ್ ಮಹಾರಾಷ್ಟ್ರಕ್ಕೆ ಸಾಗುತ್ತಿದೆ ಎಂದು ಆರೋಪಿಸಿದರು. ದೇಶ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಲಾಭ ಗಳಿಸುವ ಯತ್ನ ನಡೆಯುತ್ತಿದೆ ಎಂದು ಅವರು ದೂರಿದರು.
ಹೆಚ್ಚಿನ ಲಾಭಕ್ಕಾಗಿ ಗ್ಯಾಸ್ ಏಜನ್ಸಿಗಳು ಕಾಳಬಜಾರ್ನಲ್ಲಿ ತೊಡಗಿರುವುದನ್ನು ತಕ್ಷಣ ನಿಲ್ಲಿಸಬೇಕು. ಸರಿಯಾದ ವಿತರಣೆಗೆ ಕ್ರಮ ಕೈಗೊಳ್ಳದಿದ್ದರೆ ಡಿವೈಎಫ್ಐ ಕಾರ್ಯಕರ್ತರು ಗ್ಯಾಸ್ ಏಜನ್ಸಿಗಳಿಗೆ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಇಮ್ಮಿಯಾಝ್ ಎಚ್ಚರಿಕೆ ನೀಡಿದರು.
ಈ ವೇಳೆ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಮುಖಂಡರಾದ ನವೀನ್ ಕೊಂಚಾಡಿ, ತಯ್ಯುಬ್ ಬೆಂಗ್ರೆ, ಜಗದೀಶ್ ಬಜಾಲ್, ಖಾಲಿದ್ ಹರೇಕಳ, ತೌಸೀಫ್ ಬೈಕಂಪಾಡಿ, ಪ್ರವೀಣ್ ಕೊಂಚಾಡಿ ಹಾಗೂ ಜನವಾದಿ ಮಹಿಳಾ ಸಂಘಟನೆಯ ಭಾರತಿ ಬೋಳಾರ, ಯೋಗೀತಾ ಸುವರ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

