ಬೆಳಗಾವಿ : ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆ ಇತ್ತೀಚೆಗೆ ತೀವ್ರಗೊಂಡಿದೆ. ಈ ಸರಣಿಯಲ್ಲಿ ಇದೀಗ ಬೆಳಗಾವಿಯ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಇಂಜಿನಿಯರ್ ಒಬ್ಬರು ಬಲೆಗೆ ಬಿದ್ದಿದ್ದಾರೆ.
ಬೆಳಗಾವಿ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಜಯ್ ಸಿಂಗ್ ರಜಪೂತ್ ಅವರ ನಿವಾಸ, ಕಚೇರಿ ಮತ್ತು ಇತರ ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದರು. ಹಲವಾರು ಗಂಟೆಗಳ ಕಾಲ ನಡೆದ ಸುದೀರ್ಘ ಶೋಧ ಕಾರ್ಯಾಚರಣೆಯಲ್ಲಿ ಇಂಜಿನಿಯರ್ ಅವರು ಸಂಪಾದಿಸಿರುವ ಅಕ್ರಮ ಆಸ್ತಿ ಪತ್ತೆಯಾಗಿದೆ .ದಾಳಿಯ ವೇಳೆ ಅವರ ಆಸ್ತಿಯ ಪ್ರಮಾಣ ನೋಡಿ ಸ್ವತಃ ಅಧಿಕಾರಿಗಳೇ ಅಚ್ಚರಿಗೆ ಒಳಗಾದ ಘಟನೆ ನಡೆದಿದೆ.
ಲೋಕಾಯುಕ್ತ ಮೂಲಗಳ ಪ್ರಕಾರ, ಈ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿರುವ ಅಕ್ರಮ ಸಂಪತ್ತಿನ ವಿವರ ಹೀಗಿದೆ. 6 ಕಿ.ಲೋ ಗ್ರಾಂ ನಷ್ಟು ಚಿನ್ನ (ಸುಮಾರು 3.6 ಕೋಟಿಯಷ್ಡು ಮೌಲ್ಯ), 5 ಕಿಲೋಗ್ರಾಂ ಬೆಳ್ಳಿ, ಅಜಯ್ ಸಿಂಗ್ ಮತ್ತು ಅವರ ಕುಟುಂಬದ ಹೆಸರಿನಲ್ಲಿ ವಿವಿಧೆಡೆ ಒಟ್ಟು 18ನಿವೇಶನಗಳ ದಾಖಲೆಗಳು ಪತ್ತೆಯಾಗಿವೆ. ಈ ಎಲ್ಲ ಆಸ್ತಿಗಳ ಒಟ್ಟು ಮೌಲ್ಯ ಸುಮಾರು 14 ಕೋಟಿ ರೂಪಾಯಿಗಳಿಗೂ ಅಧಿಕ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂಜಿನಿಯರ್ ಅವರ ಅಧಿಕೃತ ಆದಾಯಕ್ಕೂ ಮತ್ತು ಪತ್ತೆಯಾದ ಆಸ್ತಿಗೂ ಯಾವುದೇ ಹೊಂದಾಣಿಕೆ ಇಲ್ಲ ಎಂದು ಪರಿಶೀಲನೆಯಲ್ಲಿ ತಿಳಿದುಬಂದಿದೆ.
ಲೋಕಾಯುಕ್ತ ಪೊಲೀಸರು ಅಜಯ್ ಸಿಂಗ್ ರಜಪೂತ್ ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅವರ ಹೆಸರಿನಲ್ಲಿರುವ ಹೆಚ್ಚಿನ ಆಸ್ತಿಗಳ ಪತ್ತೆಗೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ. ಇದೇ ಪ್ರಕರಣದಲ್ಲಿ ಇತರ ಅಧಿಕಾರಿಗಳ ಪಾತ್ರವೂ ಇದೆಯೇ ಎಂದು ಸಹ ಪರಿಶೀಲಿಸಲಾಗುತ್ತಿದೆ.

