ಹೈದರಾಬಾದ್ : ಜನಪ್ರಿಯ ಜಾನಪದ ಗಾಯಕಿ ಮಂಗ್ಲಿ ಅಲಿಯಾಸ್ ಸತ್ಯವತಿ ಅವರಿಗೆ ಸಂಕಷ್ಟ ಎದುರಾಗಿದೆ. ವ್ಯವಹಾರದ ಹೆಸರಿನಲ್ಲಿ ಸುಮಾರು 10 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಹೈದರಾಬಾದ್ನ ಪಂಜಾಗುಟ್ಟಾ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಂಗ್ಲಿ, ಅವರ ಸಹೋದರ ಶಿವ ಮತ್ತು ಮೂವರು ಇತರರ ವಿರುದ್ಧ ಈ ಕೇಸ್ ದಾಖಲಾಗಿದೆ.

ಮೈಕ್ರೋ ಫೈನಾನ್ಸ್ ಮತ್ತು ವಿವಿಧ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದರೆ ಅತಿ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ, ಸುಮಾರು 100ಕ್ಕೂ ಹೆಚ್ಚು ಮಂದಿಯಿಂದ 10 ಕೋಟಿ ರೂಪಾಯಿಗೂ ಅಧಿಕ ಹಣ ವಸೂಲಿ ಮಾಡಲಾಗಿದೆ ಎಂಬ ಆರೋಪವಿದೆ. ಹಣ ನೀಡಿ ವರ್ಷಗಳೇ ಕಳೆದರೂ, ಮಂಗ್ಲಿ ಮತ್ತು ಅವರ ತಂಡವು ಲಾಭವನ್ನಾಗಲೀ, ಅಸಲು ಹಣವನ್ನಾಗಲೀ ಹಿಂತಿರುಗಿಸಿಲ್ಲ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂತ್ರಸ್ತರ ಪರವಾಗಿ ಹಣ ಹಿಂತಿರುಗಿಸುವಂತೆ ಕೇಳಿದ ವಕೀಲ ಸುಬ್ಬಾರಾವ್ ಅವರಿಗೆ ಮಂಗ್ಲಿ ತಂಡವು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಂಗ್ಲಿ, ಆಕೆಯ ಸಹೋದರ ಶಿವ ಮತ್ತು ಇತರರು ತನಗೆ ಫೋನ್ ಮಾಡಿ ತೀವ್ರ ಎಚ್ಚರಿಕೆ ನೀಡಿದ್ದಾರೆ. “ನಿನ್ನನ್ನು ರಸ್ತೆ ಅಪಘಾತದಲ್ಲಿ ಕೊಲ್ಲುತ್ತೇವೆ” ಎಂದು ಬೆದರಿಸಿದ್ದಾಗಿ ಸುಬ್ಬಾರಾವ್ ಪೊಲೀಸರಿಗೆ ದೂರು ನೀಡಿದ್ದಾರೆ. ಇವರಿಂದ ತನಗೆ ಪ್ರಾಣಾಪಾಯವಿದೆ ಎಂದು ಅವರು ವಿವರಿಸಿದ್ದಾರೆ.

ವಕೀಲರ ದೂರಿನ ಮೇರೆಗೆ ಪಂಜಾಗುಟ್ಟಾ ಪೊಲೀಸರು ಮಂಗ್ಲಿ , ಅವರ ಸಹೋದರ ಶಿವ ಮತ್ತು ಇತರ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ನಿರ್ದೇಶಕ ವೇಣು ಉಡುಗುಲ ಅವರ ಹೆಸರೂ ಕೇಳಿಬರುತ್ತಿದ್ದು, ಪೊಲೀಸರು ವಂಚನೆಯ ಜಾಲದ ಹಿಂದಿನ ಸಂಪೂರ್ಣ ವಿವರ ಪಡೆಯಲು ತನಿಖೆ ಆರಂಭಿಸಿದ್ದಾರೆ.

ಕೇವಲ ಆರ್ಥಿಕ ವಂಚನೆಯಷ್ಟೇ ಅಲ್ಲ, ಇತ್ತೀಚೆಗೆ ಹೈದರಾಬಾದ್ ಸಮೀಪದ ಚೇವೆಳ್ಳಾದ ಖಾಸಗಿ ರೆಸಾರ್ಟ್ನಲ್ಲಿ ಮಂಗ್ಲಿ ತನ್ನ ಆಪ್ತರಿಗೆ ನೀಡಿದ್ದ ಜನ್ಮದಿನದ ಪಾರ್ಟಿ ಕೂಡ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಪೊಲೀಸರು ಈ ಪಾರ್ಟಿಯ ಮೇಲೆ ದಾಳಿ ನಡೆಸಿದಾಗ ವಿದೇಶಿ ಮದ್ಯ ಮತ್ತು ಗಾಂಜಾದಂತಹ ನಿಷೇಧಿತ ವಸ್ತುಗಳು ಪತ್ತೆಯಾಗಿದ್ದವು. ಪಾರ್ಟಿಯಲ್ಲಿದ್ದ ಕೆಲವರಿಗೆ ಡ್ರಗ್ಸ್ ಪರೀಕ್ಷೆ ನಡೆಸಿದಾಗ ಪಾಸಿಟಿವ್ ವರದಿ ಬಂದಿದ್ದು, ಅದು ಸಂಚಲನ ಮೂಡಿಸಿತ್ತು.

