ಮೈಸೂರು: ರಾಜ್ಯವನ್ನೇ ಬೆಚ್ಚಿ ಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಿಂದ ಯುವಕನೊಬ್ಬನನ್ನು ಅಪಹರಿಸಿ, ಅವನಿಗೆ ಬಲವಂತವಾಗಿ ಮಂಗಳಮುಖಿ ವೇಷ ಹಾಕಿಸಿ, ಭಿಕ್ಷಾಟನೆ ಮಾಡಿಸಲಾಗಿದೆ. ಅಷ್ಟೇ ಅಲ್ಲದೇ ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಸೆಕ್ಸ್ ವರ್ಕ್ ಬಳಸಿಕೊಂಡು, ಲಿಂಗ ಬದಲಾವಣೆಗೂ ಸಂಚು ರೂಪಿಸಿರುವ ಕರಾಳ ಪ್ರಕರಣ ಮೈಸೂರಿನ ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಂಜನಗೂಡಿನ ತ್ಯಾಗರಾಜ ಕಾಲೋನಿಯ ನಿವಾಸಿ ಅನಿಲ್ ಕುಮಾರ್ ಈ ದುಷ್ಕೃತ್ಯಕ್ಕೆ ಬಲಿಯಾಗಿದ್ದಾರೆ. ಅನಿಲ್ ಸುಮಾರು 90% ದೃಷ್ಟಿ ದೋಷವನ್ನು ಹೊಂದಿದ್ದಾರೆ. ನಾಲ್ಕು ತಿಂಗಳ ಹಿಂದೆ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದಾಗ ಮಂಗಳಮುಖಿ ಅನಿತಾ ಮತ್ತು ಅವಳ ತಂಡದವರು ಅವರನ್ನು ಸಂಪರ್ಕಿಸಿ, ನಂತರ ಬಲವಂತವಾಗಿ ಅಪಹರಿಸಿದ್ದಾರೆ.

ಅಪಹರಿಸಿದ ತಂಡ ಅನಿಲ್ ಅವರನ್ನು ಮಂಗಳೂರಿಗೆ ಕರೆದೊಯ್ದಿತು. ಅಲ್ಲಿ ಅವರಿಗೆ ಬಲವಂತವಾಗಿ ಸೀರೆ, ನೈಟಿ ತೊಡಿಸಿ, ಕಿವಿಗೆ ಓಲೆ, ಮೂಗಿಗೆ ಬಟ್ಟು ಹಾಕಿಸಲಾಯಿತು. ‘ಅಕ್ಷತಾ’ ಎಂದು ಹೆಸರಿಟ್ಟು ಮಂಗಳಮುಖಿಯಾಗಿ ವೇಷ ಬದಲಾಯಿಸಲಾಯಿತು. ನಂತರ ಅವರನ್ನು ಬೀದಿಗಳಲ್ಲಿ ಅಂಗಡಿಗಳ ಮುಂದೆ ನಿಲ್ಲಿಸಿ ಪ್ರತಿದಿನ ₹2,000 ರಿಂದ ₹3,000 ಸಂಗ್ರಹ (ಭಿಕ್ಷಾಟನೆ) ಮಾಡಿಸಲಾಗುತ್ತಿತ್ತು.ಇದರ ಜೊತೆಗೆ, ಮಂಗಳೂರು ಮತ್ತು ಕೇರಳದ ವಿವಿಧ ಭಾಗಗಳಿಗೆ ಅನಿಲ್ ಅವರನ್ನು ಕಳುಹಿಸಿ ಸೆಕ್ಸ್ ವರ್ಕ್ ಬಳಸಿಕೊಳ್ಳಲಾಗಿದೆ ಎಂದು ಸಂತ್ರಸ್ತ ದೂರಿನಲ್ಲಿ ಆರೋಪಿಸಿದ್ದಾರೆ.
ದುರುಳರು ಅನಿಲ್ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಮತ್ತು ಇತರ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಅವರನ್ನು ‘ಟ್ರಾನ್ಸ್ಜೆಂಡರ್’ ಎಂದು ನಮೂದಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಅಧಿಕೃತ ಸರ್ಟಿಫಿಕೇಟ್ ಕೂಡ ತಯಾರಿಸಲಾಗಿತ್ತು. ಈ ದಾಖಲೆಗಳ ಆಧಾರದ ಮೇಲೆ ಅನಿಲ್ ಅವರನ್ನು ಮುಂಬೈಗೆ ಕರೆದೊಯ್ದು ಶಸ್ತ್ರಚಿಕಿತ್ಸೆಯ ಮೂಲಕ ಶಾಶ್ವತವಾಗಿ ಲಿಂಗ ಬದಲಾವಣೆ ಮಾಡಲು ಸಂಚು ರೂಪಿಸಲಾಗಿತ್ತು.

ಈ ದಂಧೆಯಿಂದ ಹೊರಬರಲು ನಿರ್ಧರಿಸಿದ ಅನಿಲ್, ತಾನು ದುಡಿದ ₹3 ಲಕ್ಷ ಹಣ ಕೇಳಿದಾಗ ಆರೋಪಿ ಅನಿತಾ ಉಲ್ಟಾ ಹೊಡೆದಿದ್ದಾಳೆ. ‘ನನ್ನ ಮನೆಯಿಂದ ₹5 ಲಕ್ಷ ಮತ್ತು ಚಿನ್ನಾಭರಣ ಕಳ್ಳತನ ಮಾಡಿದ್ದೀಯಾ’ ಎಂದು ಸುಳ್ಳು ಕೇಸ್ ಹಾಕಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಹೇಗೋ ತಪ್ಪಿಸಿಕೊಂಡು ನಂಜನಗೂಡು ಸೇರಿದ ಅನಿಲ್ ಅವರಿಗೆ ಅಲ್ಲಿಗೂ ಮಂಗಳಮುಖಿಯರನ್ನು ಕಳಿಸಿ ಮತ್ತೆ ದಂಧೆಗೆ ಬರುವಂತೆ ಒತ್ತಡ ಹಾಕಲಾಗುತ್ತಿದೆಯಂತೆ.
ನಂಜನಗೂಡು ಪೊಲೀಸರು ಸ್ಪಂದಿಸದ ಹಿನ್ನೆಲೆ, ಅನಿಲ್ ಕುಮಾರ್ ಅವರು ಮೈಸೂರಿನ ಲಷ್ಕರ್ ಠಾಣೆಗೆ ದೂರು ನೀಡಿದ್ದಾರೆ. ತನಗೆ ರಕ್ಷಣೆ ಮತ್ತು ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮುಖ್ಯ ಆರೋಪಿ ಅನಿತಾ ಮತ್ತು ಅವಳ ತಂಡದವರಿಗಾಗಿ ಶೋಧ ನಡೆಯುತ್ತಿದೆ.

