ಆಗ್ರಾ : ಉತ್ತರ ಪ್ರದೇಶದ ನವವಿವಾಹಿತ ವಧು ತಮ್ಮ ಮದುವೆಯ ಮೊದಲ ರಾತ್ರಿ ₹90 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇದು ವರನಿಗೆ ಆಘಾತವನ್ನುಂಟು ಮಾಡಿದೆ ಮತ್ತು ಗಂಭೀರ ವಿವಾದಕ್ಕೆ ಕಾರಣವಾಗಿದ್ದು, ಪ್ರಕರಣ ಇದೀಗ ಪೊಲೀಸ್ ಮೆಟ್ಟಿಲೇರಿದೆ.
ಮದುವೆಯ ಮೊದಲ ರಾತ್ರಿಯೇ ವಿಚಿತ್ರ ತಿರುವು ಪಡೆದುಕೊಂಡ ಘಟನೆ ಉತ್ತರಪ್ರದೇಶದ ಆಗ್ರಾ ಜಿಲ್ಲೆಯ ಜಗದೀಶ್ಪುರದಲ್ಲಿ ನಡೆದಿದೆ. ವರನ ಆಸೆಗೆ ತಣ್ಣೀರೆರಚಿದ ವಧು, ತನ್ನನ್ನು ಮುಟ್ಟಬೇಕಾದರೆ 90 ಲಕ್ಷ ರೂಪಾಯಿ ನಗದು ನೀಡಬೇಕು ಎಂದು ಹಠ ಹಿಡಿದಿದ್ದಲ್ಲದೆ, ಬೆಲೆಬಾಳುವ ಆಭರಣಗಳೊಂದಿಗೆ ನಾಪತ್ತೆಯಾಗಿದ್ದಾಳೆ. ಈ ಹನಿಟ್ರ್ಯಾಪ್ ಮಾದರಿಯ ವಂಚನೆಯಿಂದ ಕಂಗೆಟ್ಟ ವರನ ಕುಟುಂಬ ಈಗ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದೆ.
ಜಗದೀಶ್ಪುರದಲ್ಲಿ ಅದ್ಧೂರಿಯಾಗಿ ಮದುವೆ ನಡೆದಿತ್ತು. ಸಂಬಂಧಿಕರು, ನೆರೆಹೊರೆಯವರ ಸಮ್ಮುಖದಲ್ಲಿ ಈ ಮದ್ವೆ ನಡೆದಿತ್ತು. ಮದುವೆ ಮುಗಿದು ವಧು ವರನ ಮನೆಗೆ ಬಂದಿದ್ದಳು.

ಮೊದಲ ರಾತ್ರಿ ಕೋಣೆಗೆ ಪ್ರವೇಶಿಸಿದ ವರನಿಗೆ ಅದೃಷ್ಟ ಎನಿಸಿತು. ಆದರೆ ವಧು ನೇರವಾಗಿ ಹಣದ ಬೇಡಿಕೆ ಇಟ್ಟಳು. “ನನ್ನನ್ನು ಮುಟ್ಟಬೇಕೆಂದರೆ ತಕ್ಷಣವೇ 90 ಲಕ್ಷ ರೂಪಾಯಿ ನಗದು ನೀಡಬೇಕು. ಅಷ್ಟೇ ಅಲ್ಲ, ನೀವು 90 ಲಕ್ಷ ಕೊಟ್ಟರೆ ಮಾತ್ರ ಈ ಮದುವೆಗೆ ಮಾನ್ಯತೆ” ಎಂದು ಪಟ್ಟು ಹಿಡಿದಳು. ವರ ಮತ್ತು ಆತನ ಕುಟುಂಬದವರು ಈ ಬೇಡಿಕೆ ಕೇಳಿ ಬೆಚ್ಚಿಬಿದ್ದರು. ಇಷ್ಟು ದೊಡ್ಡ ಮೊತ್ತ ನೀಡುವುದು ಅಸಾಧ್ಯವೆಂದು ಅವರು ಮನವಿ ಮಾಡಿಕೊಂಡರು.
ಹಣದ ವಿಷಯವಾಗಿ ಇಬ್ಬರ ನಡುವೆ ಜಗಳ ಆರಂಭವಾಯಿತು. ವಧು ತನ್ನ ಪೋಷಕರನ್ನು ಕರೆಸಿದಳು. ಆಗಮಿಸಿದ ಆಕೆಯ ಪೋಷಕರು ಸಹ ಮಗಳ ಬೇಡಿಕೆಯನ್ನು ಸಮರ್ಥಿಸಿಕೊಂಡರು. ವರನ ಕುಟುಂಬದವರು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ವಧು ತನ್ನ ನಿರ್ಧಾರ ಬದಲಿಸಲಿಲ್ಲ.
ವರನ ಕುಟುಂಬಸ್ಥರ ಪ್ರಕಾರ, ವಧು ಮತ್ತು ಆಕೆಯ ಪೋಷಕರು ಮನೆಯಲ್ಲಿದ್ದ ವಸ್ತುಗಳನ್ನು ಪುಡಿಪುಡಿ ಮಾಡಿದ್ದಾರೆ. ಅಡುಗೆ ಮನೆಯ ಗ್ಯಾಸ್ ಪೈಪ್ಲೈನ್ ಕಿತ್ತು ಹಾಕಿ, ಎಲ್ಲರನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ನೆರೆಹೊರೆಯವರು ಸೇರಿ ಎಚ್ಚರಿಕೆಯಿಂದ ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದು ಹೇಳಿದ್ದಾರೆ.
ಗಲಾಟೆ ಜೋರಾದ ನಂತರ, ವಧು ತನ್ನ ತಾಯಿಯೊಂದಿಗೆ ಮನೆಯಲ್ಲಿದ್ದ ಚಿನ್ನಾಭರಣಗಳು, ವರನ ತಾಯಿ ನೀಡಿದ್ದ ಒಡವೆಗಳು ಮತ್ತು ನಗದು ಹಣವನ್ನು ಎತ್ತಿಕೊಂಡು ಪರಾರಿಯಾಗಿದ್ದಾಳೆ. ವರನ ಕುಟುಂಬ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ, ಆರಂಭದಲ್ಲಿ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದರು. “ಇದು ದಾಂಪತ್ಯ ವಿವಾದ” ಎಂದು ತಳ್ಳಿಹಾಕಲು ಯತ್ನಿಸಿದರು. ಆದರೆ ವರನ ಕುಟುಂಬ ಹತಾಶರಾಗಿ ಜಿಲ್ಲಾ ನ್ಯಾಯಾಲಯದ ಮೊರೆ ಹೋದರು
ನ್ಯಾಯಾಲಯವು ಪೊಲೀಸರಿಗೆ ತಕ್ಷಣ ಪ್ರಕರಣ ದಾಖಲಿಸಲು ಆದೇಶಿಸಿತು. ಕೋರ್ಟ್ ಆದೇಶದ ಮೇರೆಗೆ, ಈಗ ಆಗ್ರಾ ಪೊಲೀಸರು ವಧು ಮತ್ತು ಆಕೆಯ ಕುಟುಂಬದವರ ವಿರುದ್ಧ ವಂಚನೆ, ಬೆದರಿಕೆ, ಚಿನ್ನಾಭರಣಗಳ ಕಳ್ಳತನ ಸೇರಿದಂತೆ ಹಲವು ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವಧುವನ್ನು ಪತ್ತೆಹಚ್ಚಲು ಪೊಲೀಸರು ತಂಡಗಳನ್ನು ರಚಿಸಿದ್ದಾರೆ.

