ಮಂಗಳೂರು– ಬಿಜೆಪಿಯ ಹಿರಿಯ ನಾಯಕ ,ಸಮಾಜ ಸೇವಕ ರಾಮಚಂದ್ರ ಬೈಕಂಪಾಡಿ ಅವರು ನಿಧನರಾಗಿದ್ದಾರೆ. ಅವರಿಗೆ 75ವರ್ಷ ವಯಸ್ಸಾಗಿತ್ತು.
ಆರಂಭದಲ್ಲಿ ನಾಟಕಕಾರರಾಗಿ ಜನಮನ ಗೆದ್ದಿದ್ದ ರಾಮಚಂದ್ರ ಬೈಕಂಪಾಡಿ ಅವರು ಸಾಹಿತಿ ,ಮೇಧಾವಿ, ಎಂ.ಎ ಪದವೀಧರರಾಗಿದ್ದರು. ಬಿಜೆಪಿ ಪಕ್ಷದ ಹಿರಿಯ ನಾಯಕರಾಗಿದ್ದ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆತ್ಮೀಯರಾಗಿದ್ದರು.
ರಾಮಚಂದ್ರ ಬೈಕಂಪಾಡಿ ಯವರು 2013ರಲ್ಲಿ ಬಿಎಸ್ ವೈಯವರ ಸ್ವತಂತ್ರ ರಾಜಕೀಯ ಪಕ್ಷ ಕೆಜೆಪಿಯಲ್ಲಿ ಮಂಗಳೂರು ಉತ್ತರದಲ್ಲಿ ಎಂಎಲ್ ಎ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಹಿಂದೊಮ್ಮೆ,ಅವರು ಹೃದಯದ ಶಸ್ತ್ರ ಚಿಕಿತ್ಸೆಗೊಳಗಾಗಿದ್ದಾಗ ಆಸ್ಪತ್ರೆಗೆ ಪಾವತಿಸಬೇಕಾಗಿದ್ದ ಚಿಕಿತ್ಸಾ ವೆಚ್ಚವನ್ನು ಬಿ ಎಸ್ ವೈಯವರೇ ಭರಿಸಿದ್ದರು. ಮೊಗವೀರ ಸಮಾಜದ ಪ್ರಬಲ ನಾಯಕರಾಗಿದ್ದ ಅವರು ಕರ್ನಾಟಕ ಮೀನುಗಾರಿಕಾಭಿವೃದ್ದಿ ನಿಗಮ KFDC ನ ಅಧ್ಯಕ್ಷರಾಗಿಯೂ ಗಮನಾರ್ಹ ಸೇವೆ ಸಲ್ಲಿಸಿದ್ದರು. ಬಿಎಸ್ ವೈ ಜತೆಗೆ ,ಮತ್ತೆ ಮಾತೃಪಕ್ಷ ಪಕ್ಷ ಬಿಜೆಪಿ ಸೇರಿದ ಅವರು ಹಿರಿಯ ಸಾಮಾಜಿಕ ಕಾರ್ಯಕರ್ತರಾಗಿದ್ದರು. ಕರ್ನಾಟಕ ರಾಜ್ಯ ಬಿಜೆಪಿಯ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.ಪರಿಸರ ಪ್ರೇಮಿ , ಪರಿಸರ ಹಿತರಕ್ಷಣಾ ಹೋರಾಟಗಾರರಾಗಿದ್ದರು.
ಅವರಿಗೆ 2021ರಲ್ಲಿ ಕರ್ನಾಟಕ ಸರಕಾರದಿಂದ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗಳು ದೊರಕಿವೆ.ಹಲವು ದಶಕಗಳ ಕಾಲ ರಾಜಕೀಯ ಕ್ಷೇತ್ರದಲ್ಲಿ ಪೂರ್ಣಕಾಲಿಕಾ ರಾಜಕಾರಣಿಯಾಗಿ ನಿಸ್ವಾರ್ಥ ಸಮಾಜಸೇವಕರಾಗಿದ್ದ ರಾಮಚಂದ್ರ ಬೈಕಂಪಾಡಿ ಅವರ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಈ ನಾಡು ಪರಿಸರ ಪ್ರೇಮಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಗಣ್ಯರನೇಕರು ಸಂತಾಪ ಸೂಚಿಸಿದ್ದಾರೆ.

